ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಿಯಾಯೋಜನೆ ಸಿದ್ದಪಡಿಸಿ: ಜಿ.ಪಂ ಸಿಇಒ

ತುಮಕೂರು, ಜೂ.9:ಜಿಲ್ಲೆಯಲ್ಲಿ ಮಲೇರಿಯಾ,ಚಿಕುನ್‌ಗುನ್ಯಾ, ಡೆಂಗ್ಯೂ ಮತ್ತಿತರರ ರೋಗಗಳ ನಿಯಂತ್ರಣ ಹಾಗೂ ಜನರಲ್ಲಿ ಅರಿವು ಮೂಡಿಸುವ ಸಂಬಂಧ ಕ್ರಿಯಾ ಯೋಜನೆಯನ್ನು ತಯಾರಿಸಿ ಮುಂದಿನ ಒಂದು ವಾರದೊಳಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತ್ ಸಿಇಓ ಕೆ.ಜಿ.ಶಾಂತರಾಮ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿಯ ಸಭೆಯ ಅಧ್ಯಕ್ಷತೆಯ ವಹಿಸಿಮಾತನಾಡುತಿದ್ದ ಅವರು, ಮಲೇರಿಯಾ, ಚಿಕನ್‌ಗುನ್ಯಾ,ಡೆಂಗ್ಯೂ ರೋಗಗಳು ಬರದಂತೆ ತಡೆಯಲು ಜನರಲ್ಲಿ ಮೊದಲಿಗೆ ಅರಿವು ಮೂಡಿಸಬೇಕಾಗಿದೆ.ಈ ರೋಗಗಳು ಪತ್ತೆಯಾಗಿರುವ ಜಿಲ್ಲೆಯ ಪ್ರದೇಶಗಳಲ್ಲಿ ಶಿಕ್ಷಣ ಇಲಾಖೆ, ಗ್ರಾಮಪಂಚಾಯತ್ ಪಿಡಿಒ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ತರ ನೆರವಿನೊಂದಿಗೆ ರೋಗಗಳು ಬರದಂತೆ ತಡೆಯಲು ಕ್ರಮ ಕೈಗೊಳ್ಳಬೇಕೆಂದರು.
ಸಾಂಕ್ರಾಮಿಕ ರೋಗ ಪ್ರಕರಣಗಳು ತುಮಕೂರು ನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ರೋಗಕ್ಕೆ ಕಾರಣವಾಗಿರುವ ಈಡೀಪಸ್ ಸೊಳ್ಳೆಯ ನಿಯಂತ್ರಣ ಮಾಡಲು ಕಾಲನಿಗದಿಯೊಂದಿಗೆ ಕ್ರಿಯಾ ಯೋಜನೆ ರೂಪಿಸಿಬೇಕಾಗಿದೆ.ಆಗ ಮಾತ್ರ ರೋಗಗಳನ್ನು ತಹಬಂದಿಗೆ ತರಲು ಸಾಧ್ಯವಾಗುತ್ತದೆ.ಈಡೀಪಸ್ ಸೊಳ್ಳೆಯು ಶುದ್ಧ ನೀರಿನಲ್ಲಿ ಕಂಡುಬರುವುದರಿಂದ ನೀರಿನ ತೊಟ್ಟಿಗಳು, ಟ್ಯಾಂಕ್‌ಗಳನ್ನು ವಾರಕ್ಕೋಮ್ಮೆ ಆದರೂ ಶುಚಿಗೊಳಿಸಿ ಒಣಗಿಸುವ ದಿನವನ್ನು ಆಚರಿಸಲು ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ.ಇದಕ್ಕಾಗಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅರಿವು ಮತ್ತು ಸೂಕ್ತ ನಿರ್ದೇಶನ ನೀಡಲಾಗುವುದು ಎಂದುಸಿಇಓ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ, ಜಿಲ್ಲಾಶಸ್ತ್ರಚಿಕಿತ್ಸಕ ವೀರಭದ್ರಯ್ಯ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಮಂಜುನಾಥ ಹಾಗೂ ರಾಜೇಂದ್ರ, ಡಾ. ವೀಣಾ, ಡಾ.ಪುರುಷೋತ್ತಮ, ರವಿಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯಸಹಾಯಕ ನಿರ್ದೇಶಕರಾದ ಡಿ. ಮಂಜುನಾಥ ಮತ್ತಿತರು ಹಾಜರಿದ್ದರು.







