ಎನ್ ಡಿಟಿವಿ ಮೇಲಿನ ಸಿಬಿಐ ದಾಳಿ ಮಾಧ್ಯಮಗಳ ಸ್ವಾತಂತ್ರ್ಯದ ವಿರುದ್ಧದ ಆಕ್ರಮಣ: ಫಾಲಿ ನಾರಿಮನ್

ಹೊಸದಿಲ್ಲಿ, ಜೂ.9: ಎನ್ ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ವಿರುದ್ಧ ಖ್ಯಾತ ವಕೀಲ ಫಾಲಿ ನಾರಿಮನ್ ವಾಗ್ದಾಳಿ ನಡೆಸಿದ್ದು, ಸಿಬಿಐ ದಾಳಿ ಮಾಧ್ಯಮಗಳ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಎಂದಿದ್ದಾರೆ.
ಪತ್ರಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಾವುದನ್ನೂ ಕಂಡುಕೊಳ್ಳದೆ ಕೇವಲ ಒಂದು ದೂರಿನ ಆಧಾರದಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿದೆ. ಕೇವಲ ಖಾಸಗಿ ವ್ಯಕ್ತಿಯೊಬ್ಬರ ಮಾಹಿತಿಯಂತೆ ಸಿಬಿಐ ಎಫ್ ಐಆರ್ ದಾಖಲಿಸಿದೆ. ಎನ್ ಡಿಟಿವಿ ಅಜೆಂಡಾದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರರನ್ನು ಚರ್ಚೆಯಿಂದ ಹೊರ ಕಳುಹಿಸಿದ ಕೆಲ ದಿನಗಳ ನಂತರ ಈ ದಾಳಿ ನಡೆದಿದೆ ಎಂದವರು ಹೇಳಿದರು.
“ನಾವು ಸ್ವಾತಂತ್ರ್ಯವನ್ನು ಅನುಭವಿಸಬೇಕಾದವರು. ಆದರೆ ಹಲವು ಕಡೆಗಳಲ್ಲಿ ಸ್ವಾತಂತ್ರ್ಯವಿಲ್ಲ. ಆದರೆ ವಾಕ್ ಸ್ವಾತಂತ್ರ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿದೆ” ಎಂದವರು ಹೇಳಿದರು.
Next Story





