ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಮಿಳುನಾಡಿನ ರೈತರಿಂದ ಅನಿರ್ದಿಷ್ಟಾವಧಿ ಮುಷ್ಕರ

ಚೆನ್ನೈ, ಜೂ.9: ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ರೈತರು ಪ್ರತಿಭಟನೆಯ ಹಾದಿ ಹಿಡಿರುವ ಬೆನ್ನಲ್ಲೇ ಸಮಗ್ರ ಬರ ಪರಿಹಾರ ಪ್ಯಾಕೇಜ್ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಮಿಳುನಾಡಿನ ರೈತರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿದಿದ್ದಾರೆ. ದಿಲ್ಲಿಯಲ್ಲಿ ತಮಿಳುನಾಡಿನ ರೈತರು ನಡೆಸಿದ್ದ 40 ದಿನಗಳ ಮುಷ್ಕರದ ನೇತೃತ್ವ ವಹಿಸಿದ್ದ ಪಿ. ಆಯ್ಯಕನ್ನು ನೇತೃತ್ವದ ರೈತರ ತಂಡ ಈ ಪ್ರತಿಭಟನೆಯನ್ನು ಆರಂಭಿಸಿದೆ.
ಮಧ್ಯಪ್ರದೇಶದಲ್ಲಿ ಪೊಲೀಸ್ ಗೋಲಿಬಾರ್‌ಗೆ ಬಲಿಯಾದ ರೈತರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ರೈತರು ಪ್ರತಿಭಟನೆಯನ್ನು ಆರಂಭಿಸಿದರು. ರೈತರಿಗೆ ನ್ಯಾಯಕ್ಕಾಗಿ ಆಗ್ರಹಿಸುವ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ರೈತ ನಾಯಕ ಪಿ. ಅಯ್ಯಕನ್ನು, ಎಲ್ಲ ವರ್ಗದ ರೈತರ ಸಾಲ ಮನ್ನಾ ಮಾಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದರೂ ತಮಿಳುನಾಡು ಸರಕಾರ ಅದನ್ನು ಉಲ್ಲಂಘಿಸುತ್ತಿದೆಯೆಂದು ಆಪಾದಿಸಿದ್ದಾರೆ. ತಿರುವಣ್ಣಾಮಲೈ ಜಿಲ್ಲೆಯಲ್ಲಿ ನಿಯಮಿತ ಮಾರುಕಟ್ಟೆಗೆ 1.5 ಕೋಟಿ ರೂ. ವೌಲ್ಯದ ಅಕ್ಕಿಯನ್ನು ಮಾರುಕಟ್ಟೆಗೆ ಮಾರಾಟ ಮಾಡಿ ಏಳು ತಿಂಗಳಾದರೂ ಅವರಿಗೆ ಹಣ ಪಾವತಿಯಾಗಿಲ್ಲವಾಗಿದ್ದು ಅವರನ್ನು ಸಾಲದ ಬಲೆಗೆ ದೂಡಲಾಗಿದೆಯೆಂದವರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಪಳನಿಸ್ವಾಮಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸಮ್ಮತಿಸಿದ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಜಂತರ್‌ಮಂತರ್‌ನಲ್ಲಿ ತಾವು ನಡೆಸುತ್ತಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಎಪ್ರಿಲ್ 23ರಂದು ಕೈಬಿಡಲಾಗಿತ್ತೆಂದು ಪಿ.ಅಯ್ಯಕನ್ನು ತಿಳಿಸಿದ್ದಾರೆ.
ಕಳೆದ 140 ವರ್ಷಗಳಲ್ಲಿ ತಮಿಳುನಾಡು ಈಗ ಅತ್ಯಂತ ಭೀಕರ ಬರಕ್ಕೆ ಸಾಕ್ಷಿಯಾಗಿದ್ದು, ಸೇಲಂ ಜಿಲ್ಲೆಯಲ್ಲಿ 10 ಲಕ್ಷ ತೆಂಗಿನ ಮರಗಳು ನಾಶವಾಗಿವೆ. ಬರದಿಂದಾಗಿ ಹಲವಾರು ಭೂಮಾಲಕರು ದಿವಾಳಿಯಾಗಿದ್ದಾರೆ. ಅನೇಕ ರೈತರು ಜಮೀನುಗಳನ್ನು ತೊರೆದು ನಗರಗಳಿಗೆ ವಲಸೆ ಹೋಗಿ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ.







