ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಮದ್ಯನಿಷೇಧ ಸೇರಿಸಲು ನಿರ್ಮಲಾನಂದ ಸ್ವಾಮೀಜಿ ಆಗ್ರಹ

ಆದಿಚುಂಚನಗಿರಿ, ಜೂ. 9: ಮದ್ಯ ನಿಷೇಧ ಮಾಡಬೇಕು ಎಂಬುದು ಬಹು ದಿನಗಳ ಆಶಯವಾಗಿದೆ. ಹೀಗಾಗಿ ಮುಂದಿನ ವರ್ಷದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಮದ್ಯ ನಿಷೇಧವನ್ನು ಸೇರಿಸಿಕೊಳ್ಳಬೇಕು ಎಂದು ನಿರ್ಮಲಾನಂದ ಸ್ವಾಮಿಜಿ ಇಂದಿಲ್ಲಿ ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ಮದ್ಯ ನಿಷೇಧಿಸಬೇಕು ಎಂದು ಆಗ್ರಹಿಸಿ ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದಿಂದ ಆದಿಚುಂಚನಗಿರಿಯವರೆಗೆ ಲಂಚಮುಕ್ತ ನಿರ್ಮಾಣ ವೇದಿಕೆ, ಕರ್ನಾಟಕ ಮದ್ಯನಿಷೇಧ ಆಂದೋಲನ ಹಾಗು ಇತರೆ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಐದು ದಿನಗಳ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶವನ್ನು, ದೇಶದ ಸಂಪತ್ತನ್ನು ಸಂರಕ್ಷಿಸಬೇಕಾದ ಯುವ ಸಮುದಾಯ ಇಂದು ಮದ್ಯದ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಆರೋಗ್ಯಯುಕ್ತ ಸಮಾಜವಿಂದು ಕೆಟ್ಟು ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯಯುಕ್ತ ಸಮಾಜ ನಿರ್ಮಾಣ ಮಾಡುವತ್ತ ಎಲ್ಲ ರಾಜಕೀಯ ಪಕ್ಷಗಳು ಕೈ ಜೋಡಿಸಬೇಕು ಎಂದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಇಂದಿನ ಸರಕಾರಗಳು ಹೆಚ್ಚಿನ ಆದಾಯಕ್ಕಾಗಿ ಮದ್ಯದಂಗಡಿಗಳನ್ನು ಮಧ್ಯರಾತ್ರಿಯವರೆಗೆ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಜನರ ರಕ್ತ ಹೀರಿ, ದುಡಿಯುವ ಕೂಲಿಕಾರರಿಂದ ಹಣವನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದರು. ಇಂತಹ ಸಂದರ್ಭದಲ್ಲಿ ಚಳವಳಿಯು ಗ್ರಾಮ ಮಟ್ಟದಿಂದ ಬೆಳೆದು, ರಾಜ್ಯಾದ್ಯಂತ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಸರಕಾರದ ವೆುೀಲೆ ಹೆಚ್ಚು ಒತ್ತಡ ಹೇರಬೇಕು. ಅದಕ್ಕಾಗಿ ನಾನು ನಿಮ್ಮಾಂದಿಗೆ ಕೈ ಜೋಡಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ವೇಳೆ ವೇದಿಕೆಯಲ್ಲಿ ಮುಖಂಡರಾದ ರವಿಕೃಷ್ಣಾರೆಡ್ಡಿ, ಎಸ್.ಎಚ್.ಲಿಂಗೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







