ಬಂಡಾಯ-ದಲಿತ ಸಾಹಿತ್ಯ, ಸಂವೇದನ-ಭಾಷಾ ಸೂಕ್ಷ್ಮತೆಯನ್ನು ಕಳೆದವು: ಪ್ರೊ.ಗಿರಡ್ಡಿ ಗೋವಿಂದರಾಜ್
ಉಡುಪಿ, ಜೂ.9: ನವ್ಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಂದುಕೊಟ್ಟ ಸಂವೇದನೆಯ ಸೂಕ್ಷ್ಮತೆ ಹಾಗೂ ಭಾಷಾ ಸೂಕ್ಷ್ಮತೆಯನ್ನು ಬಂಡಾಯ ಹಾಗೂ ದಲಿತ ಸಾಹಿತ್ಯಗಳು ಕಳೆದವು ಎಂದು ಕನ್ನಡದ ಖ್ಯಾತ ವಿಮರ್ಶಕ ಹಾಗೂ ಲೇಖಕ ಪ್ರೊ.ಗಿರಡ್ಡಿ ಗೋವಿಂದರಾಜ್ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ವಿವಿಗಳು ಜಂಟಿಯಾಗಿ ಎಂಜಿಎಂ ಕಾಲೇಜು ಆವರಣದಲ್ಲಿರುವ ಆರ್‌ಆರ್‌ಸಿಯ ಧ್ವನ್ಯಾಲೋಕದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯದ ವೈಚಾರಿಕ ನೆಲೆಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ನವೋದಯ, ನವ್ಯ ಸಾಹಿತ್ಯ ಪ್ರಕಾರಗಳಂತಲ್ಲದೇ ದಲಿತ-ಬಂಡಾಯ ಸಾಹಿತ್ಯ ಸಮಾಜದಲ್ಲಿ ಬದಲಾವಣೆಯನ್ನೇ ಪ್ರಮುಖ ಗುರಿಯಾಗಿಸಿ ಕೊಂಡಿದ್ದವು. ಜನರಿಗೆ ಅರ್ಥವಾಗುವ ಭಾಷೆಯನ್ನು ಒರಟಾಗಿ ಅವರು ಬಳಸಿಕೊಂಡರು. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಸಮಾಜದಲ್ಲಿ ಅರಿವು ಮೂಡಿಸಲು ಅವರು ಸಮುದಾಯದಂತ ತಂಡ ಕಟ್ಟಿ ನಾಟಕ, ಬೀದಿ ನಾಟಕಗಳನ್ನು ಆಡಿದರು ಎಂದರು.
ನವೋದಯ ಕಾಲದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡ ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿಯಂಥ ದೈತ್ಯ ಪ್ರತಿಭೆ ಮುಂದೆ ಹೆಚ್ಚು ಪ್ರಮಾಣದಲ್ಲಿ ಬರಲಿಲ್ಲ. ನವ್ಯಕಾಲದ ಸಾಹಿತಿಗಳು ಅಸ್ತಿತ್ವವಾದದ ಚಿಂತನೆಗೆ ಒತ್ತು ಕೊಟ್ಟರು, ಅನಂತಮೂರ್ತಿ ಅವರ ‘ಸಂಸ್ಕಾರ’, ಶಾಂತಿನಾಥ ದೇಸಾಯಿ ಅವರ ಕಾದಂಬರಿಗಳಲ್ಲಿ ಇದು ನಮಗೆ ಕಾಣಸಿಗುತ್ತದೆ. ನವ್ಯ ಪ್ರಕಾರದಲ್ಲಿ ಸಂದಿಗ್ಧತೆಯನ್ನು ನಾವು ಗುರುತಿಸಬಹುದು. ನವ್ಯ ಸಾಹಿತ್ಯಗಳು ಸ್ಪಷ್ಟ ನಿಲುವು ತೆಗೆದುಕೊಳ್ಳದೇ, ಅಡ್ಡಗೋಡೆ ಮೇಲೆ ದೀಪವಿಟ್ಟು ಮಾತನಾಡುವುದನ್ನು ನಾವು ನೋಡಬಹುದು ಎಂದು ಪ್ರೊ.ಗಿರಡ್ಡಿ ತಿಳಿಸಿದರು.
ನವೋದಯದ ಸಂದರ್ಭದಲ್ಲಿ ಕನ್ನಡ ಎಂಬುದು ಪೂರ್ಣಪ್ರಮಾಣದಲ್ಲಿ ರೂಪುಗೊಂಡಿರಲಿಲ್ಲ. ಕಾರಂತ, ಬೇಂದ್ರೆ ಅವರು ಇಡೀ ನಾಡಿಗೆ ಅರ್ಥವಾಗುವಂತೆ ಬರೆದರು. ಕಾರಂತರಂತೂ ಕನ್ನಡದ ತಟಸ್ಥ ಭಾಷೆಯಲ್ಲೇ ಬರೆದರು. ಇದನ್ನು ಪ್ರಶ್ನಿಸಿದವರಿಗೆ ನನ್ನ ಕೋಟ ಕನ್ನಡದಲ್ಲಿ ಬರೆದರೆ, ಕುಂದಾಪುರದವರಿಗೆ ಬಿಟ್ಟು ಬೇರೆಯವರಿಗೆ ಇದು ಅರ್ಥವಾಗುವುದಿಲ್ಲ ಎಂದು ಬಿಟ್ಟರು ಎಂದರು.
ಕಾಣದ ಚಳವಳಿ: 21ನೇ ಶತಮಾನದ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಯಾವುದೇ ವಿಶೇಷವಾದ ಚಳವಳಿ ಕಂಡುಬಂದಿಲ್ಲ. ಚಳವಳಿ ಇದ್ದರೆ ಒಂದು ವಿಧದ ಲಾಭ, ಇಲ್ಲದಿದ್ದರೆ ಇನ್ನೊಂದು ರೀತಿ ಲಾಭ ಎಂದು ವಿಶ್ಲೇಷಿಸಿದ ಗಿರಡ್ಡಿ, ಇದ್ದರೆ ಒಂದು ಸ್ಪಷ್ಟ ಮಾದರಿ ಮೂಡಿ ಅದನ್ನು ಎಲ್ಲರೂ ಬಳಸಿಕೊಳ್ಳ ಬಹುದು ಎಂದರು.