ಹಿಟ್ ಆ್ಯಂಡ್ ರನ್ ಪ್ರಕರಣ: ಆರೋಪಿ ಸಹಿತ ವಾಹನ ಪತ್ತೆ

ಮಂಗಳೂರು, ಜೂ. 9: ಕಳೆದ ಮೇ 29ರಂದು ತಡರಾತ್ರಿ ಪಂಪ್‌ವೆಲ್ ಸರ್ಕಲ್ ಬಳಿ ದ್ವಿಚಕ್ರ ವಾಹನವೊಂದಕ್ಕೆ ಢಿಕ್ಕಿ ಹೊಡೆದು ಇಬ್ಬರು ಸವಾರರ ಸಾವಿಗೆ ಕಾರಣವಾಗಿ ಪರಾರಿಯಾಗಿದ್ದ ವಾಹನ ಮತ್ತು ಆರೋಪಿಯನ್ನು ಸಂಚಾರ ಪೂರ್ವ ಠಾಣಾ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತಕ್ಕೆ ಕಾರಣವಾಗಿದ್ದ ವಾಹನದ ಚಾಲಕ ತನ್ನ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದ. ಈ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಭೇದಿಸಲು ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುರೇಶ್ ಕುಮಾರ್ ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ಆರೋಪಿ ಚಾಲಕ ಮತ್ತು ವಾಹನದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಬೆನ್ನಟ್ಟಿದ ತಂಡವು ನಗರದ ಹಲವು ಕಡೆಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತಪಡಿಸಿದ ವಾಹನ ಮತ್ತು ಚಾಲಕನ ಸುಳಿವಿನ ಬಗ್ಗೆ ಪ್ರಯತ್ನಿಸಿದ್ದು, ಆನಂತರ ಸುರತ್ಕಲ್ ಹಾಗೂ ಪಡುಬಿದ್ರೆ ಟೋಲ್ಗೇಟ್‌ಗಳಲ್ಲಿ ಪರಿಶೀಲಿಸಿದ್ದು, ನಂತರ ಹೆಚ್ಚಿನ ತನಿಖೆಗಾಗಿ ತಲಪಾಡಿ ಟೋಲ್ ಗೇಟ್ ನಲ್ಲಿರುವ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಲಾಗಿತ್ತು.
ಅಪಘಾತಪಡಿಸಿದ ವಾಹನದ ಎಡಬದಿಯ ಹೆಡ್ ಲೈಟ್ ಜಖಂಗೊಂಡಿದ್ದು, ಈ ಹಿನ್ನೆಲೆಯಲ್ಲಿ ಆರು ಚಕ್ರದ ಲಾರಿಯೊಂದರ ಮೇಲೆ ಸಂಶಯ ವ್ಯಕ್ತವಾಗಿ ತನಿಖೆ ಮುಂದುವರಿದಿತ್ತು. ಸದ್ರಿ ವಾಹನವು ಕೇರಳದ ಎರ್ನಾಕುಲಂ ಜಿಲ್ಲೆಯ ಪೆರಂಬವೂರು ಎಂಬಲ್ಲಿನ ವ್ಯಕ್ತಿಯೊಬ್ಬರ ಮಾಲಕತ್ವದಲ್ಲಿದ್ದು, ವಾಹನದ ನೋಂದಣಿ ತಿಳಿದು ಬಂದಿದೆ. ಆರೋಪಿ ವಾಹನ ಚಾಲಕ ಗೋಪಾಲಕೃಷ್ಣ ನನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸಿಸಿಟಿವಿಯಲ್ಲಿ ದೊರೆತ ಸಣ್ಣ ಸುಳಿವೊಂದರ ಮೂಲಕ ಈ ಪ್ರಕರಣವನ್ನು ಬೇಧಿಸುವಲ್ಲಿ ತಂಡವು ಯಶಸ್ವಿಯಾಗಿದ್ದು, ತಂಡದಲ್ಲಿರುವ ಪಿಐ ಸುರೇಶ್ ಕುಮಾರ್ , ಎಎಸ್‌ಐ ಪ್ರವೀಣ್ ಕುಮಾರ್, ಸಿಎಚ್‌ಸಿಗಳಾದ ಯಶವಂತ, ಸಂಜೀವ ಮತ್ತು ತಸ್ಲೀಂ ಆರೀಫ್ ಹಾಜರಿದ್ದರು.