ಮುಖ್ಯ ಕೋಚ್ ಹುದ್ದೆಯಲ್ಲಿ ಅನಿಲ್ ಕುಂಬ್ಳೆ ಮುಂದುವರಿಕೆ?

ಲಂಡನ್, ಜೂ.9: ಭಾರತದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಭವಿಷ್ಯವನ್ನು ನಿರ್ಧರಿಸಲು ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿರುವ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಇನ್ನಷ್ಟು ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದು, ಕುಂಬ್ಳೆ ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ.
ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಹಾಗೂ ಐಪಿಎಲ್‌ನ ಚೇರ್ಮನ್ ರಾಜೀವ್ ಶುಕ್ಲಾ ಸಹಿತ ಹಲವು ಹಿರಿಯ ಸದಸ್ಯರುಗಳು ಕುಂಬ್ಳೆ ಅವರನ್ನು ಕೋಚ್ ಹುದ್ದೆಯಿಂದ ತೆಗೆದು ಹಾಕುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪಿನ್ ದಂತಕತೆ ಕುಂಬ್ಳೆ ಕೋಚ್ ಅಧಿಕಾರದ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯಿದೆ.
ತ್ರಿಸದಸ್ಯ ಕ್ರಿಕೆಟ್ ಸಲಹಾ ಸಮಿತಿ ಗುರುವಾರ ಸಂಜೆ ಲಂಡನ್‌ನ ಪಂಚತಾರ ಹೊಟೇಲ್‌ನಲ್ಲಿ ಸಭೆ ಸೇರಿದ್ದು, ನೂತನ ಕೋಚ್ ಆಯ್ಕೆಯ ಸಂಬಂಧ ಸುಮಾರು ಎರಡು ಗಂಟೆ ಕಾಲ ಚರ್ಚೆ ನಡೆಸಿದೆ. ಹೊಸ ಕೋಚ್ ಆಯ್ಕೆಗೆ ನಿರ್ಧಾರ ಕೈಗೊಳ್ಳಲು ಇನ್ನಷ್ಟು ಸಮಯಾವಕಾಶದ ಅಗತ್ಯವಿದೆ ಎಂದು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ಮಾಹಿತಿ ನೀಡಿದೆ.
ಕಳೆದ ವರ್ಷದ ಜುಲೈನಲ್ಲಿ ಭಾರತದ ಕೋಚ್ ಆಗಿ ನೇಮಕಗೊಂಡಿದ್ದ ಕುಂಬ್ಳೆ ಮಾರ್ಗದರ್ಶನದಲ್ಲಿ ಭಾರತ 17 ಪಂದ್ಯಗಳಲ್ಲಿ 12ರಲ್ಲಿ ಜಯ ಸಾಧಿಸಿ ಅದ್ಭುತ ಯಶಸ್ಸು ಸಾಧಿಸಿತ್ತು. ತೆಂಡುಲ್ಕರ್,ಗಂಗುಲಿ ಹಾಗೂ ಲಕ್ಷ್ಮಣ್ ಅವರು ಕುಂಬ್ಳೆಯನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲು ವಿರೋಧ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಇನ್ನಷ್ಟು ಸಮಯಕೇಳಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈನಲ್ಲಿ ಜೂ.26 ರಂದು ನಡೆಯಲಿರುವ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯ(ಎಸ್‌ಜಿಎಂ) ತನಕ ಕೋಚ್ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಹಿರಿಯ ಸದಸ್ಯರಾದ ಶುಕ್ಲಾರನ್ನು ಸಂಪರ್ಕಿಸಿದ ಬಳಿಕ ಬಿಸಿಸಿಐನ ಹಂಗಾಮಿ ಕೋಚ್ ಖನ್ನಾ ಅವರು ಅಮಿತಾಭ್ ಚೌಧರಿಗೆ ಪತ್ರ ಬರೆದಿದ್ದಾರೆ.
ಹೊಸ ಕೋಚ್ ಆಯ್ಕೆಗೆ ಸಂಬಂಧಿಸಿ ಭಿನ್ನಾಭಿಪ್ರಾಯ ಮೂಡಿರುವ ಹಿನ್ನೆಲೆಯಲ್ಲಿ ಕುಂಬ್ಳೆ ಅವರು ಚಾಂಪಿಯನ್ಸ್ ಟ್ರೋಫಿ ಬಳಿಕ ನಡೆಯಲಿರುವ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಭಾರತದ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಯಿದೆ. ಒಂದು ವೇಳೆ ಕುಂಬ್ಳೆ ವಿಂಡೀಸ್‌ಗೆ ತೆರಳದೇ ಇದ್ದರೆ ಸಹಾಯಕ ಕೋಚ್ ಸಂಜಯ್ ಬಂಗಾರ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.







