ಬಿಹಾರ: 6 ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದ ಬಾಲಕನಿಗೆ “ವಿಚಿತ್ರ ಶಿಕ್ಷೆ” ಪ್ರಕಟಿಸಿದ ನ್ಯಾಯಾಲಯ

ಬಿಹಾರ, ಜೂ.9: ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಲು ಯತ್ನಿಸಿದ 17 ವರ್ಷದ ಬಾಲಕನಿಗೆ ಬಾಲಾಪರಾಧಿ ನ್ಯಾಯ ಮಂಡಳಿ “ವಕೀಲರಿಗೆ ಒಂದು ತಿಂಗಳ ಕಾಲ ನೀರು ಪೂರೈಸುವ” ಶಿಕ್ಷೆ ನೀಡಿದೆ.
ಬಾಲಕನ ಅಪರಾಧ ಸಾಬೀತಾಗಿದ್ದು, ಬಾಲಾಪರಾಧಿ ನ್ಯಾಯ ಮಂಡಳಿಯ ಮುಖ್ಯ ಮ್ಯಾಜಿಸ್ಟ್ರೇಟ್ ವಕೀಲರ ಅಸೋಸಿಯೇಶನ್ ಕಟ್ಟಡದಲ್ಲಿರುವ ವಕೀಲರು ಹಾಗೂ ಸಂದರ್ಶಕರಿಗೆ ಒಂದು ತಿಂಗಳ ಕಾಲ ನೀರು ಪೂರೈಸಬೇಕು ಎಂದು ಹೇಳಿದೆ.
“ಅಪರಾಧಿಯ ವಯಸ್ಸನ್ನು ಪರಿಗಣಿಸಿ ಸಹಾನುಭೂತಿಯಿಂದ ಆತನಿಗೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಇನ್ನೊಂದು ಅವಕಾಶ ನೀಡುವ ಸಲುವಾಗಿ ಈ ಶಿಕ್ಷೆ ನೀಡಲಾಗಿದೆ” ಎಂದು ಪ್ರಾಸಿಕ್ಯೂಶನ್ ವಕೀಲ ರಾಮ್ ನಾರಾಯಣ್ ಪಾಸ್ವಾನ್ ಹೇಳಿದ್ದಾರೆ.
ಆದರೆ ಈ ತೀರ್ಪಿನ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, “ಇದು ಕೆಟ್ಟ ಆದೇಶವಾಗಿದೆ. ಘನತೆ ಹಾಗೂ ಮೌಲ್ಯ, ಸಕಾರಾತ್ಮಕ ತುಲನೆ, ಖಾಸಗಿತನ ಹಾಗೂ ಗೌಪ್ಯತೆಯಂತಹ ಬಾಲಾಪರಾಧಿ ನ್ಯಾಯಮಂಡಳಿಯ ಮೂಲಭೂತ ತತ್ವಗಳನ್ನು ವಿರೋಧಿಸುವಂತಿದೆ” ಎಂದು ದಿಲ್ಲಿ ಹೈಕೋರ್ಟ್ ನ ವಕೀಲ ಹಾಗೂ ಮಕ್ಕಳ ಹಕ್ಕುಗಳ ಕಾನೂನು ಸಂಸ್ಥೆಯ ಸ್ಥಾಪಕ ವಿಕ್ರಮ್ ಶ್ರೀವಾಸ್ತವ ಹೇಳಿದ್ದಾರೆ.
ನಲಂದಾ ಜಿಲ್ಲೆಯ ಪನ್ಹಾರ್ ಗ್ರಾಮದ ನಿವಾಸಿಯಾದ 17 ವರ್ಷದ ಬಾಲಕ ಸಂತ್ರಸ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭ ಬಾಲಕಿ ಕಿರುಚಿದ್ದು, ಮನೆಮಂದಿ ಧಾವಿಸಿ ಬರುವಷ್ಟರಲ್ಲಿ ಬಾಲಕ ಪರಾರಿಯಾಗಿದ್ದು, ನಂತರ ನ್ಯಾಯಾಲಯಕ್ಕೆ ಶರಣಾಗಿದ್ದ.







