ಬಾಂಗ್ಲಾದೇಶಕ್ಕೆ ರೋಚಕ ಗೆಲುವು
ಹಸನ್-ಮಹಮ್ಮದುಲ್ಲಾ ದಾಖಲೆ ಜೊತೆಯಾಟ

ಕಾರ್ಡಿಫ್, ಜೂ.9: ಸ್ಟಾರ್ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಹಾಗೂ ಮಹಮ್ಮದುಲ್ಲಾ ದಾಖಲೆ ಜೊತೆಯಾಟದ ನೆರವಿನಿಂದ ಬಾಂಗ್ಲಾದೇಶ ತಂಡ ನ್ಯೂಝಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 266 ರನ್ ಗುರಿ ಪಡೆದ ಬಾಂಗ್ಲಾದೇಶ ತಂಡ ಶಾಕಿಬ್ ಹಾಗೂ ಮಹಮ್ಮದುಲ್ಲಾ ಶತಕದ ನೆರವಿನಿಂದ 47.2 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 268 ರನ್ ಗಳಿಸಿತು.
ಮಹಮ್ಮದುಲ್ಲಾ ಅಜೇಯ ಶತಕ(102, 107 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಕಿವೀಸ್ ವೇಗದ ಬೌಲರ್ ಟಿಮ್ ಸೌಥಿ(3-45) ದಾಳಿಗೆ ಸಿಲುಕಿದ ಬಾಂಗ್ಲಾ ತಂಡ ಒಂದು ಹಂತದಲ್ಲಿ 33 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡದ ರಕ್ಷಣೆಗೆ ನಿಂತ ಹಸನ್ ಹಾಗೂ ಮಹಮ್ಮದುಲ್ಲಾ ಕಿವೀಸ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 5ನೆ ವಿಕೆಟ್ ಜೊತೆಯಾಟದಲ್ಲಿ 224 ರನ್ ಸೇರಿಸಿ ಬಾಂಗ್ಲಾವನ್ನು ಗೆಲುವಿನತ್ತ ಮುನ್ನಡೆಸಿದರು. ಹಸನ್ ಹಾಗೂ ಮಹಮ್ಮದುಲ್ಲಾ ಬಾಂಗ್ಲಾದೇಶದ ಪರ ಎಲ್ಲ ವಿಕೆಟ್‌ನಲ್ಲಿ ಗರಿಷ್ಠ ಜೊತೆಯಾಟ ನಡೆಸಿ ಹೊಸ ದಾಖಲೆ ನಿರ್ಮಿಸಿದರು.
115 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 114 ರನ್ ಗಳಿಸಿದ ಹಸನ್ ಬೌಲ್ಟ್‌ಗೆ ಕ್ಲೀನ್ ಬೌಲ್ಡಾದರು. ಹಸನ್ ಔಟಾದಾಗ ಬಾಂಗ್ಲಾದ ಗೆಲುವಿನ ಹೊಸ್ತಿಲಲ್ಲಿತ್ತು. ಮಹಮ್ಮದುಲ್ಲಾ ಹಾಗೂ ಮೊಸಾಡೆಕ್ 16 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.
ಕಿವೀಸ್ 265/8:ಟೇಲರ್-ವಿಲಿಯಮ್ಸನ್ ಅರ್ಧಶತಕ
ರಾಸ್ ಟೇಲರ್(63) ಹಾಗೂ ನಾಯಕ ಕೇನ್ ವಿಲಿಯಮ್ಸನ್(57) ಆಕರ್ಷಕ ಅರ್ಧಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 265 ರನ್ ಕಲೆ ಹಾಕಿದೆ.
ಇಲ್ಲಿನ ಸೋಫಿಯಾ ಗಾರ್ಡನ್ಸ್‌ನಲ್ಲಿ ಶುಕ್ರವಾರ ಚಾಂಪಿಯನ್ಸ್ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಮೊದಲ ವಿಕೆಟ್‌ನಲ್ಲಿ 46 ರನ್ ಸೇರಿಸಿದ ಮಾರ್ಟಿನ್ ಗಪ್ಟಿಲ್(33) ಹಾಗೂ ಲೂಕ್ ರಾಂಚಿ(16) ಸಾಧಾರಣ ಆರಂಭ ನೀಡಿದರು.
ಆರಂಭಿಕ ಆಟಗಾರರಾದ ರಾಂಚಿ ಹಾಗೂ ಗಪ್ಟಿಲ್ ಔಟಾದ ಬಳಿಕ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್(57 ರನ್, 69 ಎಸೆತ, 5 ಬೌಂಡರಿ) ಹಾಗೂ ರಾಸ್ ಟೇಲರ್(63, 82 ಎಸೆತ, 6 ಬೌಂಡರಿ) 3ನೆ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು.
57 ರನ್ ಗಳಿಸಿದ್ದಾಗ ವಿಲಿಯಮ್ಸನ್ ರನೌಟಾಗುವುದರೊಂದಿಗೆ ಈ ಜೋಡಿ ಬೇರ್ಪಟ್ಟಿತು. ವಿಲಿಯಮ್ಸನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ನಾಲ್ಕನೆ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ವಿಲಿಯಮ್ಸನ್ ಕಳೆದ 3 ಇನಿಂಗ್ಸ್‌ಗಳಲ್ಲಿ 67, 100 ಹಾಗೂ 87 ರನ್ ಗಳಿಸಿದ್ದರು. ವಿಲಿಯಮ್ಸನ್ ರನೌಟಾದ ಬಳಿಕ ಟೇಲರ್ ಹಾಗೂ ಬ್ರೂಮ್(36) ನಾಲ್ಕನೆ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 228ಕ್ಕೆ ತಲುಪಿಸಿದರು. ತಂಡದ ಪರ ಸರ್ವಾಧಿಕ ರನ್ ಗಳಿಸಿದ ಟೇಲರ್ ತಸ್ಕಿನ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು.
ನ್ಯೂಝಿಲೆಂಡ್ ಕೊನೆಯ 10 ಓವರ್‌ಗಳಲ್ಲಿ ಕೇವಲ 62 ರನ್ ಗಳಿಸಿತು. ಸ್ಯಾಂಟ್ನರ್(14) ಹಾಗೂ ಸೌಥಿ(10) ಔಟಾಗದೆ ಉಳಿದರು.
ಬಾಂಗ್ಲಾದೇಶದ ಪರ ಮೊಸಾಡೆಕ್ ಹುಸೈನ್(3-13)ಯಶಸ್ವಿ ಬೌಲರ್ ಎನಿಸಿಕೊಂಡರು. ತಸ್ಕಿನ್ ಅಹ್ಮದ್(2-43) 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 50 ಓವರ್‌ಗಳಲ್ಲಿ 265/8
(ರಾಸ್ ಟೇಲರ್ 63, ವಿಲಿಯಮ್ಸನ್ 57, ಬ್ರೂಮ್ 36, ಗಪ್ಟಿಲ್ 33, ಹುಸೈನ್ 3-13)







