ಬಯಲು ಶೌಚವನ್ನು ತಡೆಯಲು ನಟ ಸಲ್ಮಾನ್‌ರಿಂದ 3,000 ಮನೆಗಳಲ್ಲಿ ಶೌಚಾಲಯ ಪುನರ್‌ನಿರ್ಮಾಣ

ಮುಂಬೈ,ಜೂ.10: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಶುಕ್ರವಾರ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಆಯುಕ್ತ ಅಜೋಯ್ ಮೆಹ್ತಾ ಅವರೊಂದಿಗೆ ಇಲ್ಲಿಯ ಆರೆ ಕಾಲನಿಗೆ ಭೇಟಿ ನೀಡಿ ನೈರ್ಮಲ್ಯ ಸೌಲಭ್ಯಗಳನ್ನು ಪರಿಶೀಲಿಸಿದ್ದು, ಬಯಲು ಶೌಚದ ವಿರುದ್ಧ ಬಿಎಂಸಿ ಅಭಿಯಾನಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡ ಬಳಿಕ ಇದು ಈ ಪ್ರದೇಶಕ್ಕೆ ಅವರ ಎರಡನೇ ಭೇಟಿಯಾಗಿದೆ.
ಇದೊಂದು ಉತ್ತಮ ಉದ್ದೇಶದ ಕಾರ್ಯ ಮತ್ತು ಈ ಬಗ್ಗೆ ಕೆಲಸ ಮಾಡಲು ಖುಷಿಯಾಗುತ್ತಿದೆ, ಆದರೆ ಇದು ಆರಂಭ ಮಾತ್ರ ಎಂದು ಹೇಳಿದ ಸಲ್ಮಾನ್, ಈ ಪ್ರದೇಶದಲ್ಲಿ 3,000ಕ್ಕೂ ಅಧಿಕ ಮನೆಗಳಿವೆ ಮತ್ತು ಪ್ರತಿಯೊಂದರಲ್ಲೂ 6-8 ಜನರು ವಾಸವಿದ್ದಾರೆ. ಈ ಪೈಕಿ ಕೆಲವು ಶೌಚಾಲಯಗಳನ್ನು ಹೊಂದಿದ್ದು, ನಾವು ಅವುಗಳನ್ನು ಪುನರ್‌ನಿರ್ಮಿಸಿದ್ದೇವೆ ಮತ್ತು ನೀರಿನ ಸಂಪರ್ಕವನ್ನೂ ಒದಗಿಸಿದ್ದೇವೆ. ಉಳಿದ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಜಾಗವಿದ್ದರೆ ಅದಕ್ಕಾಗಿ ಅನುಮತಿ ಪಡೆದುಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದರು.
ಈ ಹಿಂದೆ ಬಿಎಂಸಿಗೆ ತಲಾ ಆರು ಆಸನಗಳ ಐದು ಮೊಬೈಲ್ ಟಾಯ್ಲೆಟ್‌ಗಳನ್ನು ಕೊಡುಗೆಯಾಗಿ ನೀಡಿದ್ದ ಸಲ್ಮಾನ್, ಬಯಲು ಶೌಚ ಮಾಡುವ ಬದಲು ಅವುಗಳನ್ನು ಬಳಸುವಂತೆ ಜನರನ್ನು ಕೋರಿಕೊಂಡಿದ್ದರು.
ಈ ಪ್ರದೇಶದಲ್ಲಿ ಇನ್ನಷ್ಟು ಹೆಚ್ಚು ಶೌಚಾಲಯಗಳನ್ನು ನಿರ್ಮಿಸುವಂತೆ ಬಿಎಂಸಿಗೆ ಸೂಚಿಸಿದ ಅವರು,ಇದಕ್ಕಾಗಿ ಇನ್ನಷ್ಟು ಕೊಡುಗೆಯ ಭರವಸೆ ನೀಡಿದರು.





