ನ್ಯಾಯಬೆಲೆ ಅಂಗಡಿ ಪರವಾನಿಗೆ: ನಿಯಮಾವಳಿಯ ಎರಡು ಆದೇಶ ವಾಪಸ್

ಮಂಗಳೂರು, ಜೂ.10: ನ್ಯಾಯಬೆಲೆ ಅಂಗಡಿಯ ಪರವಾನಿಗೆಗೆ ಸಂಬಂಧಿಸಿ ರೂಪಿಸಲಾಗಿದ್ದ ನಿಯಮಾವಳಿಯ ಎರಡು ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 65 ವರ್ಷ ವಯಸ್ಸು ಮೀರಿದ ನ್ಯಾಯಬೆಲೆ ಅಂಗಡಿದಾರರ ಪರವಾನಿಗೆ ನವೀಕರಿಸದಿರುವುದು ಮತ್ತು ಎಸೆಸೆಲ್ಸಿ ಪೂರ್ತಿಗೊಳಿಸದವರ ಲೈಸನ್ಸ್ ರದ್ದುಪಡಿಸುವುದು ಎಂಬ ಎರಡು ನಿಯಮಗಳನ್ನು ರೂಪಿಸಿ ಸರಕಾರ ಆದೇಶಿಸಿತ್ತು. ಇದನ್ನು ಮರುಪರಿಶೀಲನೆ ಮಾಡುವಂತೆ ನ್ಯಾಯಬೆಲೆ ಅಂಗಡಿದಾರರು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿಯ ಜೊತೆ ಚರ್ಚಿಸಿದ ಬಳಿಕ ಎರಡು ನಿಯಮಾವಳಿಯನ್ನು ಹಿಂಪಡೆಯಲಾಗಿದೆ ಎಂದರು.
ಪಡಿತರ ಚೀಟಿ ಮೂಲಕ ಆಹಾರ ವಿತರಣೆಯ ಖಾತರಿಯ ಬಗ್ಗೆ ಬಯೋಮೆಟ್ರಿಕ್ ಅಳವಡಿಸಲಾಗಿತ್ತು. ಆವಾಗ ಹಲವು ನ್ಯಾಯಬೆಲೆ ಅಂಗಡಿದಾರರು ವಿರೋಧ ವ್ಯಕ್ತಪಡಿಸಿದ್ದರು. ಆ ಹಿನ್ನಲೆಯಲ್ಲಿ ಪರವಾನಿಗೆ ಹೊಂದಿದ ನ್ಯಾಯಬೆಲೆ ಅಂಗಡಿದಾರರು ಕನಿಷ್ಠ ಎಸೆಸೆಲ್ಸಿ ತೇರ್ಗಡೆ ಹೊಂದಿರಬೇಕು ಎಂಬ ನಿಯಮ ರೂಪಿಸಲಾಯಿತು. ಹಿರಿಯರ ಕಾಲದಿಂದಲೂ ಇದನ್ನು ನಡೆಸಿಕೊಂಡು ಬರುತ್ತಿದ್ದು, ವಿದ್ಯಾರ್ಹತೆ ಮಿತಿಯನ್ನೂ ಕೈ ಬಿಡಬೇಕು ಎಂದು ಹಲವರು ಮನವಿ ಮಾಡಿದ್ದರು. ಹಾಗಾಗಿ ಎರಡು ನಿಯಮ ಕೈಬಿಟ್ಟಿದ್ದಲ್ಲದೆ, ಅನುಕಂಪದ ಆಧಾರದ ಮೇಲೆ ಕುಟುಂಬಸ್ಥರಿಗೆ ನ್ಯಾಯಬೆಲೆ ಅಂಗಡಿಯ ಪರವಾನಿಗೆ ನೀಡಲು ನಿರ್ಧರಿಸಲಾಗಿದೆ. ಆದರೆ ಅಂತಹ ನ್ಯಾಯಬೆಲೆ ಅಂಗಡಿದಾರರ ವಿರುದ್ಧ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿರಬಾರದು ಎಂದು ಸಚಿವ ಖಾದರ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸೇವಾ ಕೇಂದ್ರವಾಗಿ ‘ನ್ಯಾಯಬೆಲೆ ಅಂಗಡಿ’ಗಳು: ಶೀಘ್ರ ಚಾಲನೆ
ರಾಜ್ಯದ ನ್ಯಾಯಬೆಲೆ ಅಂಗಡಿಗಳನ್ನು ಸೇವಾ ಕೇಂದ್ರವಾಗಿ ರೂಪಿಸುವ ಸಿದ್ಧತೆ ನಡೆದಿದ್ದು, ಬೆಂಗಳೂರಿನಲ್ಲಿ ಶೀಘ್ರ ಈ ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಸಚಿವ ಯು.ಟಿ.ಖಾದರ್ ತಿಳಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ ಪಡಿತರ ಸಾಮಗ್ರಿಗಳ ಜೊತೆ ಅವುಗಳನ್ನು ಸೇವಾ ಕೇಂದ್ರವಾಗಿ ರೂಪಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಇಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಿದ್ಯುತ್ ಬಿಲ್ ಪಾವತಿ ಇತ್ಯಾದಿ ಸೇವಾ ಸೌಲಭ್ಯವನ್ನು ನೀಡಲಾಗುವುದು. ಅಧಿವೇಶನದ ಬಳಿಕ ಬೆಂಗಳೂರಿನ 10 ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ಬಗ್ಗೆ ಆಹಾರ ಇಲಾಖೆಯ ಜೊತೆಗೆ ಕಂದಾಯ ಮತ್ತಿತರ ಇಲಾಖೆಯ ಸಹಕಾರ ಪಡೆಯಲಾಗುವುದು. ಬೆಂಗಳೂರಿನಲ್ಲಿ ಇದು ಯಶಸ್ವಿಯಾದರೆ ರಾಜ್ಯದ ಇತರ ಕಡೆಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಖಾದರ್ ತಿಳಿಸಿದರು.
ಪ್ಲಾಸ್ಟಿಕ್ ಅಕ್ಕಿ-ಮೊಟ್ಟೆ ಬಗ್ಗೆ ಗೊಂದಲ ಬೇಡ
ಪ್ಲಾಸ್ಟಿಕ್ ಅಕ್ಕಿ ಮತ್ತು ಮೊಟ್ಟೆಯ ಬಗ್ಗೆ ಯಾವುದೇ ಗೊಂದಲ ಬೇಡ. ರಾಜ್ಯ ಸರಕಾರದ ಅತ್ಯುತ್ತಮ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯಕ್ಕೆ ಕಪ್ಪುಚುಕ್ಕೆ ತರಲು ಕೆಲವರು ಮಾಡುತ್ತಿರುವ ಪಿತೂರಿ ಇದಾಗಿದೆ ಎಂದು ಖಾದರ್ ತಿಳಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ವಿತರಿಸಲಾಗಿದೆ ಎಂದು ಪ್ರತಿಪಕ್ಷದವರು ಆರೋಪ ಮಾಡಿದ್ದಾರೆ. ಆದರೆ ಆ ಬಗ್ಗೆ ಯಾವುದೇ ಆಧಾರ ಪ್ರತಿಪಕ್ಷದವರಲ್ಲಿ ಇಲ್ಲ. ರಾಜ್ಯಕ್ಕೆ ಸದ್ಯ 2.77 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಆವಶ್ಯಕತೆ ಇದೆ. ಅದನ್ನು ಕೇಂದ್ರ ಆಹಾರ ನಿಗಮದಿಂದ ಖರೀದಿಸಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಗೋದಾಮುಗಳಿಗೆ ನೇರವಾಗಿ ಅಕ್ಕಿಯನ್ನು ಸರಬರಾಜು ಮಾಡಲಾಗುತ್ತದೆ. ಅಲ್ಲಿಂದ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡಲಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಅಕ್ಕಿ ಮತ್ತು ಮೊಟ್ಟೆಯ ಪ್ರಶ್ನೆಯೇ ಬರುವುದಿಲ್ಲ. ಸರಕಾರದ ಯೋಜನೆಯ ವಿರುದ್ಧ ಪ್ರತಿಪಕ್ಷ ಮಾಡುವ ಮಸಲತ್ತು ಇದಾಗಿದೆ ಎಂದು ಖಾದರ್ ಹೇಳಿದರು.
ಖಾಸಗಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ವಿತರಣೆಗೆ ಸಂಬಂಧಿಸಿ ಆರೋಗ್ಯ ಇಲಾಖೆಯು ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದೆ ಎಂದು ಸಚಿವ ಖಾದರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







