ಅಡುಗೆ ಮನೆಗೆ ನುಗ್ಗಿದ ಕಾಳಿಂಗ!

ಹೆಬ್ರಿ, ಜೂ.10: ಪಶ್ಚಿಮ ಘಟ್ಟದ ತಪ್ಪಲಿನ ಅಂಡಾರು ಗ್ರಾಮದ ಕಿಣಿಯರ ಬೆಟ್ಟು ಎಂಬಲ್ಲಿ ಕಾಳಿಂಗ ಸರ್ಪವೊಂದು ತನ್ನ ಆಹಾರವಾದ ಕೇರೆ ಹಾವೊಂದನ್ನು ಅಟ್ಟಿಸಿಕೊಂಡು ಹೋಗುವ ಬರದಲ್ಲಿ ಉಪೇಂದ್ರ ನಾಯಕ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ನುಗ್ಗಿದ್ದು, ಮನೆಯವರಲ್ಲಿ ಕೆಲಹೊತ್ತು ಭೀತಿಯ ವಾತಾವರಣವನ್ನು ಸೃಷ್ಟಿಸಿತು.
ಮಲೆನಾಡ ತಪ್ಪಲಿನ ಪ್ರದೇಶಗಳಲ್ಲಿ ಕಾಳಿಂಗ ಸೇರಿದಂತೆ ಭಾರೀ ಗಾತ್ರದ ಹಾವುಗಳು ತಮ್ಮ ಆಹಾರವನ್ನರಸುತ್ತಾ ಮನೆಗಳಿಗೆ ನುಗ್ಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇದರಿಂದ ಜನಸಾಮಾನ್ಯರು ಕಂಗಾಲಾಗುತಿದ್ದಾರೆ. ಈ ಘಟನೆಯಲ್ಲಿ ಕೊನೆಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.
ವಲಯ ಅರಣ್ಯಾಧಿಕಾರಿ ಪೊನ್ನಪ್ಪಅವರ ಸಲಹೆಯಂತೆ ಆಗುಂಬೆ ಮಲೆಕಾಡು ಸಂಶೋಧನಾ ಕೇಂದ್ರದ ಅಜಯ್ ಗಿರಿ ಹಾಗೂ ಅವರ ತಂಡಕ್ಕೆ ಮಾಹಿತಿ ರವಾನಿಸಿ ಅವರು ಬಂದು ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕುದುರೆಮುಖ ವ್ಯಾಪ್ತಿಯ ಅರಣ್ಯಕ್ಕೆ ಬಿಡಲಾಯಿತು.
‘ಕೇರೆ, ಹೆಬ್ಬಾವು, ಕನ್ನಡಿ ಹಾವುಗಳು ಕಾಳಿಂಗ ಸರ್ಪದ ಪ್ರಿಯ ಆಹಾರ. ಉರಗ ಸಂತತಿ ಪ್ರಕೃತಿಯ ಆಹಾರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾವು ನಿರುಪದ್ರವಿ. ಆದರೆ ಅವುಗಳಿಗೆ ತಿಳಿದೊ, ತಿಳಿಯದೋ ತೊಂದರೆಯುನ್ನುಂಟು ಮಾಡಿದರೆ ಮಾತ್ರ ಅಪಾಯ.’
-ಗಿರಿ,ಆಗುಂಬೆ ಮಲೆಕಾಡು ಸಂಶೋಧನಾ ಕೇಂದ್ರದ ಸಂಶೋಧಕ.







