ಜೀವ ವೈವಿಧ್ಯ ಅಧಿನಿಯಮ ಅನುಷ್ಠಾನಕ್ಕೆ ಬಹಳ ಅರಿವು ಮುಖ್ಯ : ಸರ್ವೋತ್ತಮ ಗೌಡ
‘ಜೀವ ವೈವಿಧ್ಯ ಅಧಿನಿಯಮ-2002’ ಅರಿವು ಶಿಬಿರ

ಪುತ್ತೂರು,ಜೂ.10: ಕೇಂದ್ರ ಸರ್ಕಾರದ ಜೀವ ವೈವಿಧ್ಯ ಅಧಿನಿಯಮದ ಕುರಿತು ಗ್ರಾಮ ಸಭೆಗಳಲ್ಲಿ, ಶಾಲೆಗಳಲ್ಲಿ ಮಾಹಿತಿ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ದ.ಕ.ಜಿ.ಪಂ. ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಹೇಳಿದರು.
ಅವರು ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಮತ್ತು ದ.ಕ.ಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ಆರಿವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅಂತರ್ಜಲ ಮಟ್ಟ ಕುಸಿತ ಮತ್ತು ಭೂ ಸಮತೋಲನ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಕಾಡುಗಳು ನಾಶವಾಗಿ ವನ್ಯ ಜೀವಿ ಸಂಕುಲಗಳೂ ಅಪಾಯದಲ್ಲಿದೆ. ಇವೆಲ್ಲವನ್ನೂ ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗ್ರಾಮಮಟ್ಟದಿಂದ ರಾಷ್ಟ್ರ ಮಟ್ಟದ ತನಕ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದರು.
ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ ಶುಭ ಹಾರೈಸಿದರು. ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಸ್. ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಂಗಳೂರಿನ ಹಿರಿಯ ವಿಜ್ಞಾನಿ ಡಾ. ಹರೀಶ್ ಭಟ್, ದಾವಣಗೆರೆ ಕಾರ್ಡಿಯಲ್ ಸಂಸ್ಥೆಯ ನಿರ್ದೇಶಕ ಡಾ. ಸುದರ್ಶನ್ ಮತ್ತು ಕರ್ನಾಟಕ ಬಯೋಡೈಸ್ ಸಂಸ್ಥೆಯ ತಾಂತ್ರಿಕ ಕಾರ್ಯನಿರ್ವಾಹಕರಾದ ಐಶ್ವರ್ಯ ರೈ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಜೆ. ಶ್ರೀನಿವಾಸ ಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉದಯ ಕುಮಾರ್ ಜೋಗಿ ಸ್ವಾಗತಿಸಿದರು. ತಾ.ಪಂ. ವಿಷಯ ನಿರ್ವಾಹಕ ಶಿವಪ್ರಕಾಶ್ ಅಡ್ಪಂಗಾಯ ಕಾರ್ಯಕ್ರಮ ನಿರೂಪಿಸಿದರು.







