ಅಂಗನವಾಡಿ ಕಾರ್ಯಕರ್ತೆಯಿಂದ ಮಗುವಿಗೆ ಥಳಿತ

ಸೊರಬ, ಜೂ. 10: ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಗುವಿಗೆ ಬಾಸುಂಡೆ ಬರುವ ರೀತಿಯಲ್ಲಿ ಥಳಿಸಿದ ಘಟನೆ ತಾಲ್ಲೂಕಿನ ಎಣ್ಣೇಕೊಪ್ಪ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಆನವಟ್ಟಿ ಹೋಬಳಿಯ ಎಣ್ಣೇಕೊಪ್ಪ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಗುರುವಾರ ಅಂಗನವಾಡಿ ಕೇಂದ್ರದ ಮನು (4) ಎಂಬ ಬಾಲಕನಿಗೆ ಅಕ್ಷರ ಕಲಿಸುವಾಗ ಬೆನ್ನಿಗೆ ಹೊಡೆದಿದ್ದರಿಂದ ಬೆನ್ನಿನ ಮೇಲೆ ಬಾಸುಂಡೆಗಳು ಬಂದಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪೋಷಕರು ಶುಕ್ರವಾರ ಬೆಳಗ್ಗೆ ಗ್ರಾಮಸ್ಥರ ಜೊತೆ ಅಂಗನವಾಡಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಾರ್ಯಕರ್ತೆ ನಿರ್ಮಲಾ ಅವರನ್ನು ಎಣ್ಣೇಕೊಪ್ಪ ಅಂಗನವಾಡಿ ಕೇಂದ್ರದಿಂದ ವರ್ಗಾಯಿಸದಿದ್ದರೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಘಟನೆ ಅರಿತು ಸ್ಥಳಕ್ಕೆ ಭೇಟಿ ನೀಡಿದ ಶಿಶು ಅಭಿವೃಧಿ ಅಧಿಕಾರಿ ದಿವಾಕರ್, ಗ್ರಾಮಸ್ಥರು ಹಾಗೂ ಪೋಷಕರೊಂದಿಗೆ ಘಟನೆ ಕುರಿತು ಚರ್ಚೆ ನಡೆಸಿದರು.
ಈ ಹಿಂದೆಯೂ ಕಾರ್ಯಕರ್ತೆ ಒಂದು ಮಗುವಿಗೆ ಬಾಸುಂಡ ಬರುವಂತೆ ಹೊಡಿದಿದ್ದರು. ಆದರೆ ಇಲಾಖೆಯ ಗಮಕ್ಕೆ ತಂದಿರಲಿಲ್ಲ. ಮತ್ತೆ ಅದೇ ವರ್ತನೆ ಮುಂದುವರೆಸಿದ್ದು, ಕೂಡಲೇ ಅವರನ್ನು ವರ್ಗಾಯಿಸುವಂತೆ ಮನವಿ ಮಾಡಿದ್ದರಿಂದ ಸಿಡಿಪಿಒ ದಿವಾಕರ್ ಅವರು ತಾತ್ಕಾಲಿಕವಾಗಿ ಅವರ ಬದಲಿಗೆ ಬೇರೆ ಕಾರ್ಯಕರ್ತೆಯನ್ನು ನಿಯೋಜಿಸಿರುವುದಾಗಿ ತಿಳಿಸಿದ್ದಾರೆ.







