ಮಸೀದಿ ದರ್ಶನದ ಮೂಲಕ ತಪ್ಪುಕಲ್ಪನೆಗಳ ನಿವಾರಣೆ- ಸಿಪಿಐ ಸುರೇಶ್ ನಾಯಕ

ಭಟ್ಕಳ, ಜೂ. 10: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ, ಆಹ್ಮದ್ ಸಯೀದ್ ಜಾಮಿಯಾ ಮಸೀದಿ ಹಾಗೂ ಸದ್ಭಾವನಾ ಮಂಚ್ ಭಟ್ಕಳ ಇದರ ಸಂಯುಕ್ತಾಶ್ರಯದಲ್ಲಿ ಜರಗಿದ ಮಸೀದಿ ದರ್ಶನ ಹಾಗೂ ಇಫ್ತಾರ್ ಕಾರ್ಯಕ್ರಮ ನಡೆಯಿತು.
ಜನ ಸಾಮಾನ್ಯರಲ್ಲಿ ಮಸೀದಿ ಕುರಿತಂತೆ ಉದ್ಘವಿಸುವ ತಪ್ಪುಕಲ್ಪನೆಗಳನ್ನು ಮಸೀದಿ ದರ್ಶನವು ನಿವಾರಿಸಬಲ್ಲದು ಎಂದು ಭಟ್ಕಳ ಪೊಲೀಸ್ ವೃತ್ತಾಧಿಕಾರಿ ಸಿಪಿಐ ಸುರೇಶ್ ನಾಯಕ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಹುರುಳಿಸಾಲ್ ವ್ಯಾಪ್ತಿಯ ಆಹ್ಮದ್ ಸಯೀದ್ ಜಾಮಿಯಾ ಮಸೀದಿಯಲ್ಲಿ ಆಯೋಜಿಸಿದ್ದ ಮಸೀದಿ ದರ್ಶನ ಹಾಗೂ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಲ್ಲ ಸಮುದಾಯಗಳಲ್ಲಿ ಒಳ್ಳೆಯ ಯೊಚನೆ ಮಾಡುವವರೆ ಹೆಚ್ಚಿದ್ದು ಬೆರಳೆಣಿಕೆಯ ಮಂದಿ ಮಾತ್ರ ಹಾದಿ ತಪ್ಪಿ ನಡೆಯುತ್ತಾರೆ ಅದಕ್ಕಾಗಿ ಇಡೀ ಸಮುದಾಯದ ಜನರನ್ನು ದೂರುವುದು ಸರಿಯಲ್ಲ ಎಂದು ಅವರು, ಉಪವಾಸದ ಮೂಲಕ ಸಮಾಜದಲ್ಲಿ ಒಳಿತನ್ನು ಸ್ಥಾಪಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.
ಸದ್ಭಾವನಾ ಮಂಚ್ ಸಂಚಾಲಕ ಎಂ.ಆರ್. ಮಾನ್ವಿ ಮಾತನಾಡಿ, ಭಟ್ಕಳವು ಅತಿ ಹೆಚ್ಚು ಮಸೀದಿ ಹೊಂದಿರುವ ಊರುಗಳಲ್ಲಿ ಒಂದಾಗಿದ್ದು ಇಲ್ಲಿ ಕೇವಲ ಏಕ ದೇವರಾಧನೆ ಮತ್ತು ಸಮಾಜವನ್ನು ತಿದ್ದುವ ಕೆಲಸಗಳು ನಡೆಯುತ್ತವೆ. ಮಾಧ್ಯಮಗಳು ಬಿಂಬಿಸುವ ಹಾಗೆ ಇದು ಬಾಂಬುಗಳನ್ನು ತಯಾರಿಸುವ ಕಾರ್ಖನೆಗಳಾಗಿ ಶಸ್ತ್ರಗಾರವಾಗಲಿ ಅಲ್ಲ ಇಲ್ಲಿನ ಮೀನಾರುಗಳಿಂದ ಮೊಳಗುವ ಬಾಂಗ್ ಕರೆ ಮನುಷ್ಯರನ್ನು ಒಳಿತು ಮತ್ತು ಯಶಸ್ಸಿನಡೆ ಕರೆಯುತ್ತದೆ ಎಂದರು. ಉಪವಾಸ, ನಮಾಝ್ ಹಾಗೂ ಇಸ್ಲಾಮೀನ ಪ್ರಮುಖ ಅಧಾರ ಸ್ಥಂಭಗಳನ್ನು ಪರಿಚಯಿಸಿದರು.
ಆಹ್ಮದ್ ಸಯೀದ್ ಮಸೀದಿಯ ಇಮಾಮ್ ಮೌಲಾನ ಮುಹಮ್ಮದ್ ಜಾಫರ್ ಫಕ್ಕೀಬಾವ್ ನದ್ವಿ ಮಾತನಾಡಿ, ರಮಝಾನ್ ತಿಂಗಳಲ್ಲಿ ಮುಸ್ಲಿಮರಲ್ಲಿನ ಅಪರಾಧ ಪ್ರಮಾಣ ಶೂನ್ಯವಾಗಿರುತ್ತದೆ. ಇದಕ್ಕೆ ಕಾರಣ ಮನುಷ್ಯ ಉಪವಾಸದ ಸಂದರ್ಭದಲ್ಲಿ ದೇವನನ್ನು ಭಯಪಟ್ಟು ಬದುಕುತ್ತಾನೆ, ನಮ್ಮ ಇಡೀ ಜೀವನವೇ ರಮಝಾನ್ ಆಗಿ ಮಾರ್ಪಪಡಬೇಕು ಎಂದರು ಕರೆ ನೀಡಿದರು.
ಜಮಾಅತೆ ಇಸ್ಲಾಮ್ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ವುುಸ್ತಫಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ, ಗುರು ಸುಧೀಂದ್ರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ನರಸಿಂಹಮೂರ್ತಿ, ನೇತ್ರ ತಜ್ಞ ಡಾ.ಸತೀಶ್, ಸಮಾಜ ಸೇವಕ ಡಾ.ಆರ್.ವಿ.ಸರಾಫ್, ಸಾಹಿತಿ ಮಾನಾಸುತ ಹೆಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಇಫ್ತಾರ್ ಹಾಗೂ ಮಸೀದಿಯನ್ನು ಸಂದರ್ಶಿಸಿದರು.







