ಕಳ್ಳನ ಬಂಧನ:20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮಂಡ್ಯ, ಜೂ.10: ವಿವಿಧೆಡೆ ಚಿನ್ನಾಭರಣ ಹಾಗೂ ಹಣ ದೋಚಿದ್ದ ಕಳ್ಳನನ್ನು ಬಂಧಿಸಿರುವ ಪಾಂಡವಪುರ ಪೊಲೀಸರು, ಆತನಿಂದ ಬೈಕ್ ಸೇರಿದಂತೆ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆ ಆಲೂರು ತಾಲೂಕಿನ ಮುದಗೆರೆ ಗ್ರಾಮದ ನಿವಾಸಿ ಸಂತೋಷ ಅಲಿಯಾಸ್ ರಂಗೇಗೌಡ (30) ಬಂಧಿತ ಆರೋಪಿಯಾಗಿದ್ದು, ಈತ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬೈಕಿನಲ್ಲಿ ಬಂದು ಒಂಟಿ ಮಹಿಳೆ ಹಾಗೂ ಮಕ್ಕಳಿರುವ ಮನೆಗಳಿಗೆ ತೆರಳಿ ತಾನು ತಮ್ಮ ಸಂಬಂಧಿಕನೆಂದು ಪರಿಚಯ ಮಾಡಿಕೊಂಡು ನಾಮಕರಣ, ಹಬ್ಬಗಳು ಹಾಗೂ ಗೃಹ ಪ್ರವೇಶಕ್ಕೆ ಕರೆಯಲು ಬಂದಿರುವುದಾಗಿ ಹೇಳಿ ಮನೆಯವರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದನೆಂದು ಅವರು ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಪಾಂಡವಪುರ ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್, ಸಿಬ್ಬಂದಿಗಳಾದ ಕೆ.ಆರ್.ಸತೀಶ್, ಕೃಷ್ಣೇಗೌಡ, ಕೇಶವೇಗೌಡ, ಪ್ರದೀಪ್, ಶ್ರೀನಿವಾಸಮೂರ್ತಿ, ಅರಕರೆ ಸಬ್ ಇನ್ಸ್‌ಪೆಕ್ಟರ್ ಅಜರುದ್ದೀನ್ ನೇತೃತ್ವದ ವಿಶೇಷ ತಂಡವನ್ನು ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ ಅಭಿನಂದಿಸಿದ್ದಾರೆ.





