ಪಾದೂರು ಘಟಕ: ಹಾನಿಗೊಳಗಾದವರಿಗೆ ಚೆಕ್ ವಿತರಣೆ

ಕಾಪು, ಜೂ.10: ಪಾದೂರು ಕಚ್ಚಾ ತೈಲ ಶೇಖರಣಾ ಘಟಕದ (ಐಎಸ್‌ಪಿಆರ್‌ಎಲ್) ಯೋಜನೆಯಿಂದ ಹಾನಿಗೊಳಗಾದ 46 ಮನೆಗಳಿಗೆ ಸುಮಾರು 48 ಲಕ್ಷ ರೂ. ಪರಿಹಾರ ಧನದ ಚೆಕ್‌ಗಳನ್ನು ಕಾಪು ಪುರಸಭೆ ಸಭಾಂಗಣದಲ್ಲಿ ಶನಿವಾರ ಕಾಪು ಶಾಸಕ ವಿನಯಕುಮಾರ್ ಸೊರಕೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಹಾನಿಗೊಳಗಾದ ಮನೆಗಳಿಗೆ ದೇಶದಲ್ಲಿಯೇ ಗರಿಷ್ಠ ಮಟ್ಟದ ಪರಿಹಾರವನ್ನು ವಿತರಿಸಲಾಗಿದೆ. ಕಂಪೆನಿ ಪರಿಹಾರ ವಿತರಿಸಲು ಹಿಂದೇಟು ಹಾಕಿತ್ತು. ಜನರು, ಜನಪ್ರತಿನಿಧಿಗಳ ಹೋರಾಟದಿಂದ ಪರಿಹಾರ ಪಡೆಯಲು ಸಾಧ್ಯವಾಗಿದೆ. ಯುಪಿಸಿಎಲ್ ಯೋಜನೆಯಲ್ಲಿಯೂ ಹಿಂದೆ ಜಮೀನು ಕಳೆದುಕೊಂಡವರಿಗೆ ಸೆಂಟ್ಸ್‌ಗೆ ಕೇವಲ ರೂ. 4 ಸಾವಿರ ಪರಿಹಾರ ನೀಡಲಾಗಿತ್ತು. ಹೋರಾಟದ ಫಲವಾಗಿ ಇದೀಗ ಕಂಪೆನಿಯ ವಿಸ್ತರಣೆಗೆ ಭೂಮಿ ಕಳೆದುಕೊಳ್ಳುವವರಿಗೆ 40 ಸಾವಿರ ರೂ. ನೀಡಲಾಗುತ್ತಿದೆ. ಬಡವರು, ಸಂತ್ರಸ್ಥರು ಹಾಗೂ ರೈತರಪರ ಧ್ವನಿ ಎತ್ತಲೇಬೇಕು ಎಂದರು.
ಯೋಜನೆಯ ಸಂತ್ರಸ್ತರಾದ ಲಾರೆನ್ಸ್ ಡಿಸೋಜ ಮಾತನಾಡಿ, 2016 ಸೆಪ್ಟಂಬರ್‌ನಲ್ಲಿ ಪೈಪ್‌ಲೈನ್ ಕಾಮಗಾರಿಗೆ ಬಂಡೆ ಸ್ಫೋಟ ನಡೆಸಿದ ಪರಿಣಾಮ ಪಾದೂರು-ಕಳತ್ತೂರು ಪ್ರದೇಶದ 46 ಮನೆಗಳಿಗೆ ಹಾನಿಯಾಗಿತ್ತು. ಇನ್ನು ಮುಂದೆ ಕಾಮಗಾರಿ ನಡೆಸುವ ವೇಳೆ ಏಕಕಾಲಕ್ಕೆ ಬಂಡೆ ಸ್ಫೋಟಿಸದಂತೆ ಹಾಗೂ ಕಡಿಮೆ ಶಬ್ಧದ ಸ್ಫೋಟಕ ಸಿಡಿಸುವಂತೆ ಕಂಪೆನಿಗೆ ನಿರ್ದೇಶನ ನೀಡಬೇಕು. ಸ್ಫೋಟ ಸಮಯದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಪಂ. ಸದಸ್ಯೆ ಶಿಲ್ಪಾ ಸುವರ್ಣ, ಪುರಸಭೆ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು, ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು, ಗ್ರಾಮ ಪಂ. ಅಧ್ಯಕ್ಷ ಸಂದೀಪ್ ರಾವ್ ಮಜೂರು, ಬೆಳಪು ಗ್ರಾ. ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕುತ್ಯಾರ್ ಗ್ರಾಪಂ ಅಧ್ಯಕ್ಷ ಧೀರಜ್, ವೈ, ದೀಪಕ್, ತಹಶೀಲ್ದಾರ್ ಮಹೇಶ್ಚಂದ್ರ, ಉಪತಹಶೀಲ್ದಾರ್ ಶೌಕತ್ತುಲ್ಲ ಅಸ್ಸಾದಿ, ಕಂದಾಯ ನಿರೀಕ್ಷಕ ಆರ್.ಎಂ. ನಾಯಕ್ ಇದ್ದರು.







