ಅತ್ಯಾಚಾರ: ಅಕ್ರಮ ಗರ್ಭಪಾತದಿಂದ ಬಾಲಕಿ ಸಾವು

ಕಮ್ಮಮ್, ಜೂ.11: ಅತ್ಯಾಚಾರಕ್ಕೆ ಒಳಾಗದ ಮಾನಸಿಕ ಅಸ್ವಸ್ಥ ಬಾಲಕಿಯೊಬ್ಬಳಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸುವ ವೇಳೆ ಆಕೆ ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ.
ಕಲ್ಲೂರು ಮಂಡಲದ ಸ್ಥಳೀಯ ಪಂಚಾಯ್ತಿ, ಅತ್ಯಾಚಾರ ಎಸಗಿದ ವ್ಯಕ್ತಿ ಆಕೆಯ ಗರ್ಭಪಾತ ಮಾಡಿಸುವಂತೆ ಸೂಚಿಸಿತ್ತು. ಗರ್ಭಪಾತದ ಬಳಿಕ ಉಂಟಾದ ಸೋಂಕಿನಿಂದ ಬಾಲಕಿ ಮೃತಪಟ್ಟಿದ್ದಾಳೆ.
ಎರ್ರಪಂಡಿರ ಗ್ರಾಮದ 15 ವರ್ಷದ ಬಾಲಕಿಯ ಪೋಷಕರು ದಿನಗೂಲಿಗಳಾಗಿದ್ದು, ಅವರು ಕೆಲಸಕ್ಕೆ ಹೋಗಿದ್ದಾಗ ಅದೇ ಗ್ರಾಮದ 24 ವರ್ಷ ವಯಸ್ಸಿನ ಯುವಕ ಎಂ.ಚೆನ್ನಕೇಶವಲು ಎಂಬಾತ ಆಕೆಯ ಸ್ನೇಹ ಬೆಳೆಸಿ, ಲೈಂಗಿಕವಾಗಿ ಶೋಷಿಸಲು ಆರಂಭಿಸಿದ್ದ. ಆರು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ. ಕಳೆದ ಎಪ್ರಿಲ್‌ನಲ್ಲಿ ಬಾಲಕಿ ಗರ್ಭಿಣಿಯಾಗಿರುವುದು ಪೋಷಕರಿಗೆ ತಿಳಿದುಬಂತು. ಬಾಲಕಿಯನ್ನು ಪ್ರಶ್ನಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅರಂಭದಲ್ಲಿ ಅತ್ಯಾಚಾರಿಯ ಕುಟುಂಬದವರ ಜತೆ ರಾಜಿಯಲ್ಲಿ ಪ್ರಕರಣ ಇತ್ಯರ್ಥಪಡಿಸಲು ಪೋಷಕರು ಮುಂದಾದರು. ಆದರೆ ಅದಕ್ಕೆ ಸ್ಪಂದನೆ ಸಿಕ್ಕದಿದ್ದಾಗ, ಒಂದೂವರೆ ತಿಂಗಳ ಹಿಂದೆ ಗ್ರಾಮ ಪಂಚಾಯ್ತಿಯ ಮೊರೆ ಹೋದರು. ಬಾಲಕಿಯನ್ನು ಅತ ವಿವಾಹವಾಗಬೇಕು ಅಥವಾ ಆಕೆಯ ಗರ್ಭಪಾತದ ಖರ್ಚು ಭರಿಸುವ ಜತೆಗೆ ಒಂದಷ್ಟು ಹಣಕಾಸು ನೆರವು ನೀಡಬೇಕು ಎಂದು ಪಂಚಾಯ್ತಿ ತೀರ್ಮಾನ ಮಾಡಿತ್ತು. ಎರಡನೇ ಆಯ್ಕೆಯನ್ನು ಒಪ್ಪಿಕೊಂಡ ಚೆನ್ನಕೇಶವಲು ಕುಟುಂಬ 14 ಸಾವಿರ ರೂಪಾಯಿ ಪರಿಹಾರ ನೀಡಿತು. ಬಾಲಕಿಗೆ ಕಮ್ಮಮ್‌ನ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಲಾಗಿತ್ತು ಎಂದು ಹೇಳಲಾಗಿದೆ.







