ಮಥುರಾದಲ್ಲಿ ಕಾರು ಕಾಲುವೆಗೆ ಬಿದ್ದು 10 ಯಾತ್ರಿಕರ ಸಾವು

ಮಥುರಾ(ಉತ್ತರ ಪ್ರದೇಶ), ಜೂ.11:ರಾಜಸ್ಥಾನದ ಪ್ರಸಿದ್ದ ದೇವಸ್ಥಾನಕ್ಕೆ ಹೋಗಿ ವಾಪಸಾಗುತ್ತಿದ್ದ ಕಾರೊಂದು ಉತ್ತರ ಪ್ರದೇಶದ ಮೊಗ್ರಾ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಹತ್ತು ಮಂದಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಒಂದೇ ಕುಟುಂಬಕ್ಕೆ ಸೇರಿದ ಯಾತ್ರಿಕರು ಕಾರಿನಲ್ಲಿ ರಾಜಸ್ಥಾನದ ದೌಸ ಜಿಲ್ಲೆಯ ಮೆಹಂದಿಪುರ್ ಬಾಲಾಜಿ ದೇವಸ್ಥಾನದಿಂದ ಮರಳುತ್ತಿದ್ದಾಗ ಕಾರು ಚಾಲಕ ಹರೀಶ್ ಚಂದ್ ಅವರ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಆದಿತ್ಯ ಶುಕ್ಲಾ ತಿಳಿಸಿದ್ದಾರೆ.
ಕಾರ್ ನಲ್ಲಿದ್ದ ಮಹೇಶ್ ಶರ್ಮ, ದೀಪಕ್ ಶರ್ಮ, ಪೂನಮ್ ಶರ್ಮ, ರಿತ್ವಿಕ್ ಶರ್ಮ, ಹಾರ್ದಿಕ್ ಶರ್ಮ, ರೋಶನ್ ಖುಷ್ಬು, ಹಿಮಂಶಿ ಮತ್ತು ಸುರಭಿ ಎಂಬವರು ಮೃತಪಟ್ಟಿದ್ದಾರೆ.
ನೀರಿನಲ್ಲಿ ಮುಳುಗಿ ಮೃತಪಟ್ಟ ಯಾತ್ರಿಕರ ಪೈಕಿ ಎಂಟು ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನಿಬ್ಬರ ಶವ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Next Story





