ಜನಾಂಗೀಯ ದ್ವೇಷ ಪ್ರಕರಣ: ಮುಸ್ಲಿಂ ಮಹಿಳೆಯ ಹಿಜಾಬನ್ನು ಕಿತ್ತೆಸೆದು, ದೂಡಿಹಾಕಿದ ದುಷ್ಕರ್ಮಿ

ಲಂಡನ್, ಜೂ.11: ರಸ್ತೆಬದಿ ಸಾಗುತ್ತಿದ್ದ ಮುಸ್ಲಿಂ ಮಹಿಳೆಯೋರ್ವರ ಹಿಜಾಬನ್ನು ಹಿಡಿದೆಳೆದ ವ್ಯಕ್ತಿಯೊಬ್ಬ ಆಕೆಯನ್ನು ದೂಡಿ ಹಾಕಿದ ಘಟನೆ ಲಂಡನ್ ನ ಪೀಟರ್ ಬರ್ಗ್ ಎಂಬಲ್ಲಿ ನಡೆದಿದೆ.
ಕಾರಿನಿಂದ ಇಳಿದ ಮಹಿಳೆ ತನ್ನ 3 ವರ್ಷದ ಮಗಳೊಂದಿಗೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಆಕೆಯನ್ನು ಹಿಂಬದಿಯಿಂದ ದೂಡಿ ಹಾಕಲಾಗಿತ್ತು. ನಂತರ ಮಹಿಳೆಯ ಹಿಜಾಬನ್ನು ಕಿತ್ತು ಎಸೆಯಲಾಗಿತ್ತು. ಈ ಸಂದರ್ಭ ಯಾವುದೇ ನಿಂದನಾತ್ಮ ಮಾತುಗಳನ್ನು ಆಕ್ರಮಣಕಾರ ಹೇಳಿರಲಿಲ್ಲ. ಆದರೆ ಈ ಪ್ರಕರಣವನ್ನು ಜನಾಂಗೀಯ ಅಥವಾ ಧಾರ್ಮಿಕ ದ್ವೇಷ ಪ್ರಕರಣವಾಗಿ ಪರಿಗಣಿಸುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ಪೀಟರ್ ಬರ್ಗ್ ಟೆಲಿಗ್ರಾಫ್ ವರದಿ ಮಾಡಿದೆ.
ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯು ಬಿಳಿ ಜನಾಂಗೀಯನಾಗಿದ್ದು,ಎತ್ತರವಿದ್ದ ಹಾಗೂ ಮಧ್ಯಮಗಾತ್ರದ ದೇಹವನ್ನು ಹೊಂದಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತ ಮಹಿಳೆಗೆ ಯಾವುದೇ ಗಾಯಗಳಾಗಿಲ್ಲವಾದರೂ, ಘಟನೆಯಿಂದ ಆಕೆ ವಿಚಲಿತಳಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ ಲಂಡನ್‌ನಲ್ಲಿ ನಡೆದ ಶಂಕಿತ ಭಯೋತ್ಪಾದಕ ದಾಳಿಯ ಬಳಿಕ, ಆ ನಗರದಲ್ಲಿ ದ್ವೇಷಪರಾಧದ ಪ್ರಕರಣಗಳಲ್ಲಿ ಐದುಪಟ್ಟು ಹೆಚ್ಚಾಗಿರುವುದಾಗಿ ಲಂಡನ್ ಮೇಯರ್ ಸಾದಿಕ್ ಖಾನ್ ಕಳೆದ ವಾರ ತಿಳಿಸಿದ್ದಾರೆ. ಇಂತಹ ಜನಾಂಗೀಯ ದ್ವೇಷದ ಘಟನೆಗಳನ್ನು ಪೊಲೀಸರು ಎಳ್ಳಷ್ಟೂ ಸಹಿಸಲಾರರು ಎಂದವರು ಎಚ್ಚರಿಕೆ ನೀಡಿದ್ದರು.







