ಅಪರಾಧ ಹೆಚ್ಚಳಕ್ಕೆ ಪಾಪ ಪ್ರಜ್ಞೆ ಇಲ್ಲದಿರುವುದು ಕಾರಣ: ಗಫಾರ್ ಬೇಗ್
ಚಿಕ್ಕಮಗಳೂರು, ಜೂ.11: ಸಮಾಜದಲ್ಲಿ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದಕ್ಕೆ ಮೂಲ ಕಾರಣ ಮನುಷ್ಯರಲ್ಲಿ ಪಾಪ ಪ್ರಜ್ಞೆ ಇಲ್ಲದಿರುವುದು ಎಂದು ನಿವೃತ್ತ ಪ್ರಾಂಶುಪಾಲ, ಲೇಖಕ ಗಫಾರ್ ಬೇಗ್ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಸುವರ್ಣ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ, ಎಂ.ಬಿ.ಘನಿ ಅವರು ತಮ್ಮ ಬದುಕಿನ ಅನುಭವಗಳನ್ನು ಕಾವ್ಯಗಳನ್ನಾಗಿ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕನ್ನಡದ ವಚನ ಸಾಹಿತ್ಯ ಸೇರಿದಂತೆ ಧರ್ಮ ಗ್ರಂಥಗಳನ್ನು ಉರ್ದು ಭಾಷೆಗೆ ಅನುವಾದಿಸುವ ಮೂಲಕ ಸಮನ್ವಯತೆ ಸಾಧಿಸಿದ್ದರು ಎಂದರು.
ಎಂ.ಬಿ.ಘನಿ ಅವರ ಬದುಕು ಮತ್ತು ಬರಹದ ಕುರಿತು ಲೇಖಕಿ ಗಾಯತ್ರಿ ಶ್ರೀಧರ್ ಉಪನ್ಯಾಸ ನೀಡಿದರು. ಘನಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಘನಿ ಅವರ ಪುತ್ರ ಅಸ್ಲಾಂ ಪರ್ವೀಝ್, ಚಿತ್ರನಟ ಶಂಖನಾದ ಅರವಿಂದ್ ಉಪಸ್ಥಿತರಿದ್ದರು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ. ಮಂಜುನಾಥಸ್ವಾಮಿ ನಿರೂಪಿಸಿದರು, ಖಜಾಂಚಿ ಬೆನಟಿಕ್ ಜೇಮ್ಸ್ ವಂದಿಸಿದರು.