ಭಾಷೆ ಬೆಳೆಯಲು ಮಮತೆ, ಅಭಿಮಾನ ಮುಖ್ಯವಲ್ಲ: ಭಾಷಾ ವಿಜ್ಞಾನಿ ಎಸ್.ಎನ್.ಶ್ರೀಧರ್

ಉಡುಪಿ, ಜೂ.11: ಒಂದು ಭಾಷೆಯ ಮೇಲಿನ ಮಮತೆ, ಕಾಳಜಿ, ಅಭಿ ಮಾನಕ್ಕಿಂತ, ಯಾವ ಭಾಷೆ ಕಲಿಯುವುದರಿಂದ ಒಳ್ಳೆಯ ಕೆಲಸ, ಹೆಚ್ಚು ಸಂಬಳ, ಗೌರವ ಸಿಗುತ್ತದೆ ಎಂಬುದು ಮುಖ್ಯವಾಗುತ್ತದೆ. ಇದನ್ನು ನಾವು ನಮ್ಮ ರಾಜ್ಯ ಭಾಷಾ ನೀತಿಯಿಂದ ಮಾಡಿದಾಗ ಮಾತ್ರ ಕನ್ನಡವನ್ನು ಹೆಚ್ಚು ಹೆಚ್ಚು ಜನರು ಕಲಿಯಲು ಸಾಧ್ಯ ಎಂದು ನ್ಯೂಯಾರ್ಕ್ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಭಾರತ ಅಧ್ಯಯನ ಕೇಂದ್ರದ ನಿರ್ದೇಶಕ ಹಾಗೂ ಭಾಷಾ ವಿಜ್ಞಾನಿ ಎಸ್.ಎನ್. ಶ್ರೀಧರ್ ಹೇಳಿದ್ದಾರೆ.
ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಮಣಿ ಪಾಲ ವಿಶ್ವವಿದ್ಯಾನಿಲಯದ ವತಿಯಿಂದ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ರವಿವಾರ ‘ಕನ್ನಡ ಭಾಷೆಯ ಸಮ ಕಾಲೀನ ಆತಂಕಗಳು’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಪೋಷಕರ ದೃಷ್ಠಿಯಲ್ಲಿ ಯಾವ ಉಪಯೋಗಳು ಹೆಚ್ಚು ಅಪೇಕ್ಷಣೀಯವಾಗಿ ರುತ್ತದೆಯೋ, ಆ ಉಪಯೋಗಳನ್ನು ಯಾವ ಭಾಷೆ ಹೆಚ್ಚು ಕೊಡುತ್ತದೆಯೋ ಅದನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಭಾಷೆಯ ಬಗ್ಗೆ ಕಾಳಜಿ, ಮಮತೆ ಇರ ಬೇಕು ನಿಜ. ಆದರೆ ಮಮತೆಗಾಗಿ ಯಾರು ಭಾಷೆಯನ್ನು ಕಲಿಯುವುದಿಲ್ಲ. ಆ ರೀತಿ ಕಲಿತರೂ ಅದು ಹೆಚ್ಚು ಕಾಲ ಉಳಿಯುವುದೂ ಇಲ್ಲ ಎಂದರು.
ಇಂದು ಹೆಚ್ಚು ಜನ ಇಂಗ್ಲಿಷ್ ಕಲಿಯುವುದಕ್ಕೆ ಇದೇ ಕಾರಣ. ನಾಳೆ ಈ ಸ್ಥಾನಕ್ಕೆ ಚೈನೀಸ್ ಭಾಷೆ ಬಂದರೆ ಅದನ್ನೂ ಕಲಿಯಬಹುದು. ಇಂಗ್ಲಿಷ್ ಭಾಷೆ ಶಾಶ್ವತ ಉಳಿಯುತ್ತದೆ ಎಂಬುದಕ್ಕಾಗಿ ಚಾರೀತ್ರಿಕವಾದ ಯಾವುದೇ ಆಧಾರವೂ ಇಲ್ಲ. ಅದು ಅಮೆರಿಕಾದ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯದಿಂದಾಗಿ ಮಾತ್ರ ಇಂದು ಉಳಿದುಕೊಂಡಿದೆ ಎಂದು ಅವರು ತಿಳಿಸಿದರು.
ಭಾಷಾವಾರು ಪ್ರಾಂತ್ಯವಾಗಿ ದೇಶ ಪುನರಚನೆಯಾದಾಗ ಪ್ರತಿಯೊಂದು ಪ್ರಾಂತ್ಯದ ಭಾಷೆಗಳಿಗೆ ಬೆಂಬಲ ದೊರೆಯಿತು. ಇದರಿಂದ ಕನ್ನಡದಂತ ಪ್ರಾದೇಶಿಕ ಭಾಷೆಗಳು ಬಲಿಷ್ಠವಾದವು. ಆಗಿನ ಪರಿಸ್ಥಿತಿಗೆ ಹೋಲಿಸಿದರೆ ಪ್ರಸ್ತುತ ಕನ್ನಡ ಭಾಷೆ ಸಾಕಷ್ಟು ಬಲಿಷ್ಠವಾಗಿರುವುದು ಕಂಡುಬರುತ್ತದೆ ಎಂದು ಅವರು ಹೇಳಿದರು.
ಭಾಷಾ ವಿಜ್ಞಾನದ ಪ್ರಕಾರ ಒಂದು ಭಾಷೆಯ ಬಲವು ಅದನ್ನು ಎಷ್ಟು ಕಾರ್ಯಕ್ಷೇತ್ರಗಳಲ್ಲಿ ಬಳಸಬಹುದು, ಆ ಕ್ಷೇತ್ರ ಎಷ್ಟು ವೌಲ್ಯಯುತವಾದುದು ಮತ್ತು ಅಪೇಕ್ಷಣೀಯವಾದುದು ಎಂಬುದರ ಮೇಲೆ ಇರುತ್ತದೆ. ಸಂಸ್ಕೃತವು ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬಲಿಷ್ಠವಾಗಿದ್ದರೂ ಆ ಕ್ಷೇತ್ರದಲ್ಲಿ ಕನ್ನಡವೂ ಕೂಡ ಉಪಯೋಗ ಆಗುತ್ತಿದೆ ಎಂಬುದು ದೊಡ್ಡ ವಿಚಾರ ಆಗಲ್ಲ. ಆದರೆ ಕಂಪ್ಯೂ ಟರ್ ಕ್ಷೇತ್ರದಲ್ಲಿ ಕನ್ನಡ ಬಳಕೆ ಆಗುವುದು ಬಹಳ ಅಪೇಕ್ಷಣೀಯವಾಗುತ್ತದೆ. ಹಾಗಾಗಿ ಜನ ಇಂಗ್ಲಿಷ್ ಕಲಿಯಲು ಪ್ರಾಮುಖ್ಯತೆ ನೀಡುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟರು.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ತಮ್ಮ ಮಕ್ಕಳು ಯಾವ ಭಾಷೆ ಕಲಿಯಬೇಕೆಂದು ನಿರ್ಧರಿಸುವ ಹಕ್ಕು ಪೋಷಕರಿಗೆ ಇರಬೇಕೆ ಹೊರತು ಸರಕಾರಕ್ಕೆ ಅಲ್ಲ. ಈ ಮಧ್ಯೆ ನಾವು ನಮ್ಮ ಭಾಷೆಗಳನ್ನು ಕಾಪಾಡುವುದು ರಾಜ್ಯ ಸರಕಾರದ ಕರ್ತವ್ಯ ಎಂಬುದನ್ನು ಕೂಡ ಒಪ್ಪಿಕೊಂಡಿದ್ದೇವೆ. ಹೀಗಿರುವಾಗ ಇವು ಎರಡ ಮಧ್ಯೆ ಸಂಘರ್ಷ ಉಂಟಾಗುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ಶ್ರೀಪತಿ ತಂತ್ರಿ ವಹಿಸಿದ್ದರು. ಕೇಂದ್ರ ಸಂಯೋಜನಾಧಿಕಾರಿ ಪ್ರೊ.ವರದೇಶ್ ಹಿರೇಗಂಗೆ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು. ಸಹ ಸಂಯೋಜನಾಧಿಕಾರಿ ಡಾ.ಅಶೋಕ್ ಆಳ್ವ ವಂದಿಸಿದರು.
‘ಭಾಷಾ ಮಿಶ್ರಣದಿಂದಲೇ ಕನ್ನಡ ಬೆಳೆದಿರುವುದು’
ಎಲ್ಲ ಭಾಷೆಗಳನ್ನು ಒಳಗೊಂಡ ಮಿಶ್ರ ಕನ್ನಡ ಭಾಷೆ ಇಂದು ಪ್ರಚಲಿತ ವಾಗಿದೆ. ವಿದ್ಯಾವಂತರು ಮಾತನಾಡುವುದು ಇದೇ ಕನ್ನಡ ಭಾಷೆಯನ್ನು. ಇಂಗ್ಲಿಷ್ ಹೇಗೆ ಕನ್ನಡದಲ್ಲಿ ಹಾಸು ಹೊಕ್ಕಾಗಿ ಸೇರಿದೆ ಅಂದರೆ ಅದಕ್ಕೆ ಅದರದ್ದೆ ಆದ ವ್ಯಾಕರಣ ಹೊಂದಿದೆ. ಆದುದರಿಂದ ಈ ಮಿಶ್ರ ಭಾಷೆ ವ್ಯಾಕರಣ ಬದ್ಧ ವಾಗಿದೆ. ನಮ್ಮ ಸಾಹಿತ್ಯದಲ್ಲೂ ಮಿಶ್ರ ಕನ್ನಡ ಸೇರಿಕೊಂಡಿದೆ. ಪಂಪನ ಕಾವ್ಯದಲ್ಲಿ ಕನ್ನಡದ ಜೊತೆ ಸಂಸ್ಕೃತ ಮಿಶ್ರಣಗೊಂಡಿದೆ. ನಾವು ಅದನ್ನು ಸ್ವೀಕರಿಸಿ ಕೊಂಡಿ ದ್ದೇವೆ. ಕನ್ನಡ ಬೆಳೆದಿರುವುದೇ ಭಾಷಾ ಮಿಶ್ರಣದಿಂದಾಗಿ ಎಂದು ಭಾಷಾ ವಿಜ್ಞಾನಿ ಎಸ್.ಎನ್.ಶ್ರೀಧರ್ ಹೇಳಿದರು.
11ನೆ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಆಂಗ್ಲೋ ಸ್ಯಾಕ್ಸನ್(ಇಂಗ್ಲಿಷ್) ಭಾಷೆ ಬಳಕೆಯಲ್ಲಿತ್ತು. ಸಾವಿರ ವರ್ಷಗಳ ಹಿಂದೆ ಇಂಗ್ಲೆಂಡಿನ ಆಡಳಿತದಲ್ಲಿ ಆದ ಬೆಳವಣಿಗೆಯಿಂದ ಫ್ರೆಂಚರು ಆಳ್ವಿಕೆ ನಡೆಸಲು ಆರಂಭಿಸಿದರು. ನಾವು ಬ್ರಿಟಿಷರ ಆಳ್ವಿಕೆಯಲ್ಲಿ ಇಂಗ್ಲಿಷ್ ಕಲಿತ ರೀತಿಯಲ್ಲಿ ಆಗ ಆಂಗ್ಲರು ಫ್ರೆಂಚ್ ಕಲಿಯಬೇಕಾಯಿತು. ಇದರ ಪರಿಣಾಮ ಇಂಗ್ಲಿಷ್ ಭಾಷೆಯಲ್ಲಿ ಆಂಗ್ಲೋ ಸ್ಯಾಕ್ಸನ್ ಭಾಷೆಯ ಮೂಲ ಪದಗಳು ಉಳಿದಿರುವುದು ಕೇವಲ ಶೇ. 25ರಷ್ಟು ಮಾತ್ರ. ಉಳಿದ ಎಲ್ಲವೂ ಫ್ರೆಂಚ್ ಪದಗಳಾಗಿವೆ. ಫ್ರೆಂಚರು ಆಳ್ವಿಕೆ ನಡೆಸಿದ ಫಲವಾಗಿ ಫ್ರೆಂಚ್ ಭಾಷೆಯ ಪದಗಳು ಸೇರಿ ಇಂಗ್ಲಿಷ್ ಭಾಷೆ ಬಲಿಷ್ಠ ಹಾಗೂ ವಿಸ್ತಾರಗೊಂಡಿದೆ. ಈಗ ಫ್ರೆಂಚ್ ಜೊತೆ ಲ್ಯಾಟಿನ್, ಗ್ರೀಕ್ ಕೂಡ ಸೇರಿ ಕೊಂಡಿದೆ ಎಂದು ಅವರು ತಿಳಿಸಿದರು.







