ನಾಗರಿಕ ಸೇವೆ ತರಬೇತಿಗಾಗಿ ಅಕಾಡೆಮಿ ಅಗತ್ಯ: ಜೆ.ಆರ್.ಲೋಬೊ

ಉಡುಪಿ, ಜೂ.11: ನಾಗರಿಕ ಸೇವೆಗಳಲ್ಲಿ ಹೆಚ್ಚು ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳುವ ನಿಟ್ಟನಲ್ಲಿ ತರಬೇತಿಗಾಗಿ ಸೂಕ್ತ ಹಾಗೂ ಸುಸಜ್ಜಿತವಾದ ತರಬೇತಿ ಕೇಂದ್ರದ ಅಗತ್ಯ ಇದೆ ಎಂದು ಮಂಗಳೂರು ಶಾಸಕ ಜೆ.ಆರ್. ಲೋಬೊ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಶೋಕ ಮಾತಾ ಇಗರ್ಜಿ ಸಭಾಂಗಣಲ್ಲಿ ರವಿವಾರ ನಡೆದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ ಹಾಗೂ ದಾಂತಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾದ 2017-18 ಸಾಲಿನ ನೂತನ ಟೆಲಿಫೋನ್ ಡೈರಕ್ಟರಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಕ್ರೈಸ್ತ ಸಮುದಾಯ ಇಂದು ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿದೆ. ಆದರೆ ಉನ್ನತ ಹುದ್ದೆಗಳಾದ ನಾಗರಿಕ ಸೇವೆಯಲ್ಲಿ ಮಾತ್ರ ಬಹಳ ಹಿಂದೆ ಇದೆ. ಈ ನಿಟ್ಟಿನಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯಗಳು ಗಂಭೀರ ಚಿಂತನೆ ನಡೆಸ ಬೇಕಾಗಿದೆ. ಸಮುದಾಯದ ಯುವಜನರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲು ತರಬೇತಿ ಅಕಾಡೆಮಿಯ ಅಗತ್ಯ ಇದೆ. ಈ ನಿಟ್ಟಿನಲ್ಲಿ ಎರಡೂ ಧರ್ಮಪ್ರಾಂತ್ಯಗಳು ಮುಂದಾಳತ್ವ ವಹಿಸಬೇಕು ಎಂದರು.
ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ.ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ ಮಿನೇಜಸ್ ಉದ್ಘಾಟಿಸಿದರು. ಬರಹಗಾರ ಸ್ಟೀವನ್ ಕ್ವಾಡ್ರಸ್ ಅವರಿಗೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ದಿ.ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ನೀಡಲಾಯಿತು.
ನೂತನ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ, ಎನ್‌ಎಸ್ ಯುಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ, ಕ್ರಿಶ್ಚಿಯನ್ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಶಾಂತ್ ಜತ್ತನ್ನ, ರೋಬರ್ಟ್ ಮಿನೇಜಸ್ ಅವರನ್ನು ಗೌರವಿಸ ಲಾಯಿತು. ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಉಪಾಧ್ಯಕ್ಷೆ ಲೀನಾ ಮಿನೇಜಸ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಸಿಂತಾ ಕೊಲಾಸೊ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಸೊಲೊಮನ್ ಅಲ್ವಾರಿಸ್ ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿದರು.
ಕೆಎಸ್‌ಡಿಎಲ್ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ, ಎಐಸಿಯು ರಾಜ್ಯಾಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ.ವಲೇರಿಯನ್ ಮೆಂಡೊನ್ಸಾ, ನಿಕಟಪೂರ್ವ ಅಧ್ಯಕ್ಷ ವಿಲಿಯಂ ಮಚಾದೊ, ವಲಯಾಧ್ಯಕ್ಷರುಗಳಾದ ಸ್ಟೀವನ್ ಪ್ರಕಾಶ್ ಲೂವಿಸ್, ಲಿಯೋ ಸಿಕ್ವೇರಾ, ಉಡುಪಿ ಘಟಕಾಧ್ಯಕ್ಷೆ ಬೆನಡಿಕ್ಟಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಉಡುಪಿ ವಲಯಾಧ್ಯಕ್ಷೆ ಮೇರಿ ಡಿಸೋಜ ಸ್ವಾಗತಿಸಿದರು. ಫ್ಲಾವೈನ್ ಡಿಸೋಜ ಹಾಗೂ ಮೇಬಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.







