ರೈತರ ಕಷ್ಟಗಳನ್ನು ಅರಿಯಲು ಮೋದಿ,ಚೌಹಾಣ್ ವಿಫಲ ; ಸಂಘ ಪರಿವಾರ ನಾಯಕ

ಹೊಸದಿಲ್ಲಿ,ಜೂ.11: ತಮ್ಮ ಉತ್ಪನ್ನಗಳಿಗೆ ಕಡಿಮೆ ದರಗಳಿಂದಾಗಿ ಕಂಗೆಟ್ಟಿರುವ ರೈತರಿಗೆ ಪರಿಹಾರವನ್ನು ಒದಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲ ಗೊಂಡಿವೆ ಎಂದು ಸಂಘ ಪರಿವಾರದ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘ(ಬಿಕೆಎಸ್)ದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಭಾಕರ ಕೇಳ್ಕರ್ ಅವರು ಹೇಳಿದ್ದಾರೆ. ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸುದೀರ್ಘ ಸಮಯದಿಂದ ರೈತರು ಆಕ್ರೋಶದಿಂದ ಕುದಿಯುತ್ತಿದ್ದಾರೆ. ಪರಿಸ್ಥಿತಿ ಯಾವುದೇ ಸಮಯದಲ್ಲಿಯೂ ಸ್ಫೋಟಗೊಳ್ಳಬಹುದು. ಸರಕಾರವು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಈಗ ಈ ವಿಷಯವು ಸಂಪೂರ್ಣವಾಗಿ ರಾಜಕೀಕರಣಗೊಂಡಿದೆ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ರೈತರ ಮುಷ್ಕರ ಮತ್ತು ಮಂದಸೋರ್‌ನಲ್ಲಿ ಪೊಲೀಸ್ ಗೋಲಿಬಾರಿನಲ್ಲಿ ಐವರು ರೈತರ ಸಾವಿನ ನಡುವೆಯೇ ಕೇಳ್ಕರ್‌ರ ಈ ಹೇಳಿಕೆ ಹೊರಬಿದ್ದಿದೆ.
ಮಂದಸೋರ್‌ನಲ್ಲಿ ಕಂಡು ಬಂದಿದ್ದು ರೈತ ಸಮುದಾಯದ ಸಣ್ಣ ಭಾಗವೊಂದರ ಪ್ರತಿಕ್ರಿಯೆ ಅಷ್ಟೇ. ಕೇಂದ್ರದ ನರೇಂದ್ರ ಮೋದಿ ಮತ್ತು ರಾಜ್ಯದ ಶಿವರಾಜ ಸಿಂಗ್ ನೇತೃತ್ವದ ಸರಕಾರಗಳು ಕಳೆದ ಮೂರು ವರ್ಷಗಳಲ್ಲಿ ರೈತರಿಗೆ ಬಹಳಷ್ಟು ಭರವಸೆಗಳನ್ನು ನೀಡಿವೆ. ಅವು ಕೆಲವು ಕೆಲಸಗಳನ್ನೂ ಮಾಡಿವೆ. ಆದರೆ ವಾಸ್ತವದಲ್ಲಿ ಏನೂ ಕಾಣುತ್ತಿಲ್ಲ ಎಂದರು.
ಸಾಮಾಜಿಕ ಮಾಧ್ಯಮಗಳಲ್ಲಿನ ಕರೆಗಳನ್ನು ಗಮನಿಸಲು ಮತ್ತು ಸರಕಾರಕ್ಕೆ ಮರು ಮಾಹಿತಿಯನ್ನು ಒದಗಿಸುವಲ್ಲಿ ರಾಜ್ಯ ಗುಪ್ತಚರ ಇಲಾಖೆಯು ವಿಫಲಗೊಂಡಿದೆ ಎಂದ ಅವರು, ಪರಿಸ್ಥಿತಿಯು ಈಗ ನಿಯಂತ್ರಣವನ್ನು ಮೀರಿದೆ ಮತ್ತು ಅಶಾಂತಿಯು ಇತರ ರಾಜ್ಯಗಳಿಗೂ ಹರಡಬಹುದು, ತನ್ಮೂಲಕ ಬಿಜೆಪಿ ಮತ್ತು ಪ್ರಧಾನಿಯ ವರ್ಚಸ್ಸಿಗೂ ಹಾನಿಯನ್ನುಂಟು ಮಾಡಬಹುದು ಎಂದು ಎಚ್ಚರಿಕೆಯನ್ನು ನೀಡಿದರು. ಬಟಾಟೆ ಮತ್ತು ಈರುಳ್ಳಿಗಳೂ ರೈತರ ಬಳಿಯೇ ಉಳಿದುಕೊಂಡಿವೆ, ಮಳೆಗಾಲ ಆರಂಭವಾದರೆ ಅವುಗಳನ್ನು ದಾಸ್ತಾನಿರಿಸುವುದೂ ಅವರಿಗೆ ಸಾಧ್ಯವಾಗುವುದಿಲ್ಲ ಮತ್ತು ಅವರ ಸಿಟ್ಟು ಇನ್ನಷ್ಟು ತೀವ್ರಗೊಳ್ಳಲಿದೆ. ಸರಕಾರವು ರೈತರ ಉತ್ಪನ್ನಗಳ ಖರೀದಿಯನ್ನು ತಕ್ಷಣವೇ ಆರಂಭಿಸಬೇಕು ಎಂದರು.
ಇದೇ ವೇಳೆ ಇನ್ನೊಂದು ರೈತ ಸಂಘಟನೆ ಭಾರತೀಯ ಕಿಸಾನ್ ಯೂನಿಯನ್‌ನ ನಾಯಕ ಭೂಪಿಂದರ್ ಸಿಂಗ್ ಮಾನ್ ಅವರು ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲಮನ್ನಾ ಮಾಡುವುದಾಗಿ ಪ್ರಧಾನಿಯವರು ರೈತರಿಗೆ ನೀಡಿದ್ದ ಭರವಸೆಗಳನ್ನು ನೆನಪಿಸಿ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಬಿಜೆಪಿಯ ಕಿಸಾನ್ ಮಂಚ್‌ನ ಮುಖ್ಯಸ್ಥ ವೀರೇಂದ್ರ ಸಿಂಗ್ ಮಸ್ತ್ ಅವರು ರೈತರ ಮುಷ್ಕರವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರತಿಭಟನೆಯು ಪ್ರಜಾಪ್ರಭುತ್ವದ ಭಾಗವಾಗಿದೆ ಎಂದಿರುವ ಅವರು, ಪ್ರತಿಭಟನೆಯು ಹಿಂಸಾತ್ಮಕವಾಗಲು ಆಡಳಿತದ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ.







