ತಪ್ಪಿದ ಚುನಾವಣಾ ಸಮೀಕ್ಷೆ: ಟಿವಿ ಲೈವ್ ನಲ್ಲೇ ಪುಸ್ತಕ ಹರಿದು ತಿಂದ ಲೇಖಕ!

ಲಂಡನ್, ಜೂ.11: ಬ್ರಿಟನ್ ಚುನಾವಣೆಯಲ್ಲಿ ಲೇಬರ್ ಪಾರ್ಟಿ 32 ಶೇ.ಕ್ಕಿಂತಲೂ ಕಡಿಮೆ ಫಲಿತಾಂಶ ದಾಖಲಿಸುತ್ತದೆ ಎಂಬ ತನ್ನ ಸಮೀಕ್ಷೆ ತಪ್ಪಿದ ಹಿನ್ನೆಲೆಯಲ್ಲಿ ಲೇಖಕರೊಬ್ಬರು ತನ್ನ ಪುಸ್ತಕವನ್ನೇ ತಿಂದ ಘಟನೆ ನಡೆದಿದೆ.
ಯುನಿವರ್ಸಿಟಿ ಆಫ್ ಕೆಂಟ್ ನಲ್ಲಿ ರಾಜಕೀಯ ವಿಷಯದ ಪ್ರೊಫೆಸರ್ ಆಗಿರುವ ಮ್ಯಾಥ್ಯೂ ಗುಡ್ ವಿನ್ “ಬ್ರೆಕ್ಸಿಟ್: ವೈ ಬ್ರಿಟನ್ ವೋಟೆಡ್ ಟು ಲೀವ್ ದಿ ಯುರೋಪಿಯನ್ ಯುನಿಯನ್” ಎಂಬ ಪುಸ್ತಕದ ಸಹಲೇಖಕರಾಗಿದ್ದಾರೆ. ಕಳೆದ ತಿಂಗಳು ಟ್ವೀಟೊಂದನ್ನು ಮಾಡಿದ್ದ ಅವರು, ಜೆರೆಮಿ ಕೋರ್ ಬಿನ್ ರ ಲೇಬರ್ ಪಾರ್ಟಿ ಚುನಾವಣೆಯಲ್ಲಿ 38 ರಷ್ಟೂ ಫಲಿತಾಂಶ ದಾಖಲಿಸುವುದಿಲ್ಲ ಎಂದಿದ್ದರು. ಆದರೆ ಜೂ.8ರಂದು ನಡೆದ ಚುನಾವಣೆಯಲ್ಲಿ ಲೇಬರ್ ಪಾರ್ಟಿ 40.3 ಶೇ. ಫಲಿತಾಂಶ ದಾಖಲಿಸಿತ್ತು.
“ಜೆರೆಮಿ ಕೋರ್ ಬಿನ್ ನಾಯಕತ್ವದಲ್ಲಿ ಲೇಬರ್ ಪಾರ್ಟಿ 38 ಶೇ. ಫಲಿತಾಂಶ ದಾಖಲಿಸುತ್ತದೆ ಎಂದು ನಾನು ನಂಬುವುದಿಲ್ಲ. ಒಂದು ವೇಳೆ ಅವರು ದಾಖಲಿಸಿದರೆ ನಾನು ನನ್ನ ಹೊಸ “ಬ್ರೆಕ್ಸಿಟ್” ಪುಸ್ತಕವನ್ನು ತಿನ್ನಬಲ್ಲೆ” ಎಂದಿದ್ದರು. ಆದರೆ ಫಲಿತಾಂಶ ಪ್ರಕಟವಾದ ನಂತರ ಲೇಬರ್ ಬೆಂಬಲಿಗರು ಗುಡ್ ವಿನ್ ರನ್ನು ಟೀಕಿಸಲು ಆರಂಭಿಸಿದ್ದರು.
ನಂತರ ಸ್ಕೈ ಟಿವಿಯಲ್ಲಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಗುಡ್ ವಿನ್ ಭಾಗವಹಿಸಿದ್ದು, ಅವರು ತಮ್ಮ ಮಾತನ್ನು ಪಾಲಿಸುತ್ತಾರೋ ಎಂದು ಪ್ರಶ್ನಿಸಲಾಗಿತ್ತು. ಇದಕ್ಕುತ್ತರಿಸಿದ ಅವರು, “ನಾನು ನಿರೀಕ್ಷಿಸಿದ್ದಕ್ಕಿಂತ 2 ಶೇ. ಹೆಚ್ಚು ಫಲಿತಾಂಶ ದಾಖಲಿಸಿರುವುದರಿಂದ ಆಶ್ಚರ್ಯಕ್ಕೊಳಗಾಗಿದ್ದೇನೆ. ನಾನು ಮಾತನ್ನು ಪಾಲಿಸುವವನು. ಆದ್ದರಿಂದ ಇಲ್ಲೇ ಕೂತು ನನ್ನ ಪುಸ್ತಕವನ್ನು ತಿನ್ನುತ್ತೇನೆ” ಎಂದು ಟಿವಿ ಲೈವ್ ನಲ್ಲೇ ಪುಸ್ತಕದ ಪುಟಗಳನ್ನು ಹರಿದು ತಿಂದಿದ್ದಾರೆ.







