ಸುಭಾಷ್‌ನಗರ: ಉಚಿತ ಪುಸ್ತಕ, ಲೇಖನಿ ಸಾಮಗ್ರಿ ವಿತರಣೆ
ಮೂಡುಬಿದಿರೆ, ಜೂ. 11: ಪುರಸಭಾ ವ್ಯಾಪ್ತಿಯ ಪುಚ್ಚೇರಿಕಟ್ಟೆ ಸುಭಾಷ್‌ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ಪುರಸಭಾ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ ವಿತರಿಸಿದರು.
ನಂತರ ಮಾತನಾಡಿದ ಅವರು ಸರಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ವಿದ್ಯೆ ಸಹಿತ ವಿವಿಧ ರೀತಿಯ ಪ್ರತಿಭೆಗಳಿವೆ ಅವುಗಳನ್ನು ಅವರು ಸಾದರ ಪಡಿಸಲು ಪ್ರೋತ್ಸಾಹದ ಅಗತ್ಯವಿದೆ ಈ ನಿಟ್ಟಿನಲ್ಲಿ ಹೆತ್ತವರು, ಶಿಕ್ಷಕರು ಮತ್ತು ಊರಿನ ಗಣ್ಯರು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಪುರಸಭಾ ನಾಮ ನಿರ್ದೇಶಿತ ಸದಸ್ಯ ಆಲ್ವೀನ್ ಮಿನೇಜಸ್, ಪುಚ್ಚೇರಿಕಟ್ಟೆ ಅಂಗನವಾಡಿ ಶಿಕ್ಷಕಿ ವಿಜಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕ ಸುರೇಂದ್ರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ದಾನಿ ರತ್ನಾಕರ ದೇವಾಡಿಗ ಕಳೆದ 15 ವರ್ಷಗಳಿಂದ ಈ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕ ಲೇಖನಿ ಸಾಮಗ್ರಿಗಳು, ಟೈ, ಐಡೆಂಟಿ ಕಾರ್ಡುಗಳನ್ನು ನೀಡುತ್ತಾ ಬರುವ ಮೂಲಕ ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಶಿಕ್ಷಕಿ ಮೀನಾಕ್ಷಿ ವಂದಿಸಿದರು. ಇದೇ ಸಂದರ್ಭದಲ್ಲಿ ಸರಕಾರವು ವಿದ್ಯಾರ್ಥಿಗಳಿಗೆ ನೀಡಿರುವ ಸಮ ವಸ್ತ್ರಗಳನ್ನು ವಿತರಿಸಲಾಯಿತು.







