ಮಂಗಳೂರು, ಬಂಟ್ವಾಳ, ಬೆಳ್ತಂಗಡಿಯಲ್ಲಿ ಉತ್ತಮ ಮಳೆ
.jpeg)
ಮಂಗಳೂರು, ಜೂ.11: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯು ರವಿವಾರ ಬಿರುಸುಗೊಂಡಿದ್ದು, ಮಂಗಳೂರು, ಬಂಟ್ವಾಳ ಹಾಗೂ ಬೆಳ್ತಂಗಡಿಯಲ್ಲಿ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಮಂಗಳೂರಿನಲ್ಲಿ 100.8 ಮಿ.ಮೀ. ಮಳೆ ಬಿದ್ದರೆ, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕ್ರಮವಾಗಿ 105.0 ಮತ್ತು 104.1 ಮಿ.ಮೀ. ಮಳೆಯಾಗಿದೆ. ಉಳಿದಂತೆ ಪುತ್ತೂರಿನಲ್ಲಿ 83.6 ಮಿ.ಮೀ ಮತು ಸುಳ್ಯದಲಿಋಲ 52.2 ಮಿ.ಮೀ. ಮಳೆಯಾಗಿದೆ.
ಶನಿವಾರದ ಮಳೆ ವರದಿಯಂತೆ ಬಂಟ್ವಾಳ 33.5, ಬೆಳ್ತಂಗಡಿ 21.3, ಪುತ್ತೂರು 30.4 ಹಾಗೂ ಸುಳ್ಯ 20.0 ಮಿ.ಮೀ. ಮತ್ತು ಮಂಗಳೂರು 54.1 ಮಿ.ಮೀ. ಮಳೆಯಾಗಿತ್ತು.
ವಸತಿ ಸಮುಚ್ಚಯದ ಕಂಪೌಂಡ್ ಗೋಡೆ ಕುಸಿತ:
ನಗರದ ಪಿವಿಎಸ್ ಕಲಾಕುಂಜ ಬಳಿಯ ‘ಶಾಲಿನಿ ಎನ್‌ಕ್ಲೇವ್’ ವಸತಿ ಸಮುಚ್ಚಯದ ಆವರಣ ಗೋಡೆ ಕುಸಿದ ಬಗ್ಗೆ ವರದಿಯಾಗಿದೆ. ಈ ಸಂಕೀರ್ಣದ ಆವರಣ ಗೋಡೆಯ ಹತ್ತಿರ ಚರಂಡಿ ತಾಗಿಕೊಂಡೇ ಇದ್ದು, ಚರಂಡಿಯಲ್ಲಿ ನೀರು ತುಂಬಿ ಹರಿದಿದ್ದರಿಂದ ಆವರಣ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ. ಇನ್ನೂ ಹೆಚ್ಚಿನ ಮಳೆಯಾದರೆ ಆವರಣದ ಮಣ್ಣು ಕುಸಿದು ಸಮುಚ್ಚಯಕ್ಕೆ ಹಾನಿಯಾಗುವ ಸಂಭವವಿದೆ ಎನ್ನಲಾಗಿದೆ.
ಮನೆಗಳಿಗೆ ಹಾನಿ:
ಕಾವೂರಿನಲ್ಲಿ ಬಾಲಕೃಷ್ಣ ಪಡುಕೋಡಿ ಎಂಬವರ ಮನೆಯ ಕಂಪೌಂಡ್ ಗೋಡೆ ಹತ್ತಿರ ಮನೆಯ ಅರುಣ್ ಡಿಸೋಜ ಎಂಬವರ ಮನೆ ಮೇಲೆ ಬಿದ್ದು ಮನೆಯ ಗೋಡೆಗೆ ಭಾಗಶಃ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಪಂಜಿಮೊಗರಿನಲ್ಲಿ ಮನೆಯ ಗೋಡೆಯೊಂದು ಕುಸಿದು ಮನೆಗೆ ಹಾನಿಯಾಗಿದೆ. ಪಡುಕೋಡಿ ಗ್ರಾಮದಲ್ಲಿ ಫ್ರಾನ್ಸಿಸ್ ಡಿಸೋಜ ಎಂಬವರ ಎಂಬವರ ಮನೆ ಸಂಪೂರ್ಣ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ರಸ್ತೆಯಲ್ಲಿ ಹರಿದ ನೀರು- ಸಂಚಾರದಲ್ಲಿ ವ್ಯತ್ಯಯ:
ರವಿವಾರ ಸಂಜೆ ನಗರದ ಜ್ಯೋತಿ ಸರ್ಕಲ್‌ನ ಕಾಂಕ್ರಿಟ್ ರಸ್ತೆಯಲ್ಲಿ ನೀರು ನಿಂತು ಸಂಚಾರದಲ್ಲಿ ವ್ಯತ್ಯಯವಾಗಿರುವ ಬಗ್ಗೆ ವರದಿಯಾಗಿದೆ. ಬೆಳಗ್ಗಿನ ಸುರಿದ ಮಳೆಗೆ ಸಂಜೆ ವೇಳೆಗೆ ಕಾಂಕ್ರಿಟ್ ರಸ್ತೆಯಲ್ಲಿ ನೀರು ನಿಂತಿದ್ದು, ಬಸ್ಸುಗಳ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೆ, ಕೊಟ್ಟಾರ ಚೌಕಿಯ ಇನ್ಫೋಸಿಸ್ ಬಳಿ ರಸ್ತೆಯಲ್ಲಿ ಕೆಲವು ಕಾಲ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು. ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾಗಿರುವ ಚರಂಡಿಗೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ನಿಂತಿದೆ.







