ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಯುವತಿ ಆಸ್ಪತ್ರೆಯಲ್ಲಿ ಮೃತ್ಯು

ಉಡುಪಿ, ಜೂ.11: ಮೊಣಕಾಲಿನ ಗಂಟಿನ ಶಸ್ತ್ರಚಿಕಿತ್ಸೆಗೆ ಒಳಗಾದ ಯುವತಿಯೊಬ್ಬರು ಉಸಿರುಕಟ್ಟಿದಂತಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೆಂಗಳೂರಿನ ವಿನಿತಾ ಭಟ್ ಎಂದು ಗುರುತಿಸಲಾಗಿದೆ.
ದೊಡ್ಡಣಗುಡ್ಡೆಯ ಡಾ. ಎ.ಪಿ.ಭಟ್ ಎಂಬವರ ಸಹೋದರನ ಪುತ್ರಿ ವಿನಿತಾ ಕಾಲಿನ ಗಂಟು ನೋವಿನಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿನಿಂದ ಜೂ. 8ರಂದು ಉಡುಪಿಗೆ ಕರೆತಂದು ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು.
ಜೂ. 9ರಂದು ವೈದ್ಯರು ಆಕೆಯ ಕಾಲಿನ ಗಂಟಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ನಂತರ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಸಂಜೆ ವೇಳೆ ಆಸ್ವತ್ರೆಯಲ್ಲಿ ವಾಂತಿ ಮಾಡಲು ಆರಂಭಿಸಿದ ಆಕೆ ನಂತರ ಉಸಿರು ಕಟ್ಟಿದಂತಾಗಿ ತೀವ್ರವಾಗಿ ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ವತ್ರೆಗೆ ದಾಖಲಿಸಲಾಯಿತು. ಆದರೆ ಜೂ.11ರಂದು ಬೆಳಗ್ಗೆ 6ಗಂಟೆಯ ಸುಮಾರಿಗೆ ವಿನಿತಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಉಸಿರಾಟದ ತೊಂದರೆ ಅಥವಾ ಇನ್ನಾವುದೋ ಖಾಯಿಲೆಯಿಂದ ಆಕೆ ಮೃತಪಟ್ಟಿರಬಹುದು ಎಂದು ಅಲ್ಲಿನ ವೈದ್ಯರು ತಿಳಿಸಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





