ಭಾರತ ಸೆಮಿಫೈನಲ್‌ಗೆ: ಸಂಘಟಿತ ದಾಳಿಗೆ ದಕ್ಷಿಣ ಆಫ್ರಿಕ ತತ್ತರ

ಲಂಡನ್, ಜೂ.11: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ‘ಬಿ’ ಗುಂಪಿನ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಭಾರತ ಭರ್ಜರಿ ಜಯ ಗಳಿಸುವ ಮೂಲಕ ಇಂದು ಸೆಮಿಫೈನಲ್ ಪ್ರವೇಶಿಸಿದೆ.
ಗೆಲುವಿಗೆ 192 ರನ್ ಗಳ ಸವಾಲು ಪಡೆದ ಭಾರತ ಇನ್ನೂ 72 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ 78 ರನ್ (83 ಎ, 12 ಬೌ,1 ಸಿ), ನಾಯಕ ವಿರಾಟ್ ಕೊಹ್ಲಿ ಔಟಾಗದೆ 76 ರನ್ (101 ಎ, 7 ಬೌ,1 ಸಿ) ,ರೋಹಿತ್ ಶರ್ಮ 12 ರನ್ ಮತ್ತು ಯುವರಾಜ್ ಸಿಂಗ್ ಔಟಾಗದೆ 23 ರನ್ ಗಳಿಸಿದರು. ಟಾಸ್ ಜಯಿಸಿದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತ್ತು. ಭಾರತದ ಸಂಘಟಿತ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ 44.3 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟಾಗಿತ್ತು.
ಭಾರತದ ಆಟಗಾರರ ಚುರುಕಿನ ಕ್ಷೇತ್ರರಕ್ಷಣೆ, ಶಿಸ್ತುಬದ್ಧ ದಾಳಿಯ ಫಲವಾಗಿ ದಕ್ಷಿಣ ಆಫ್ರಿಕದ ಬ್ಯಾಟಿಂಗ್ ಬೇಗನೆ ಕೊನೆಗೊಂಡಿತು. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ಎರಡು ಕ್ಯಾಚ್ ಮತ್ತು ಮೂವರನ್ನು ರನೌಟ್ ಮಾಡಿದರು. ದಕ್ಷಿಣ ಆಫ್ರಿಕದ ಕ್ವಿಂಟನ್ ಡಿ ಕಾಕ್ ಅರ್ಧಶತಕ(53) ದಾಖಲಿಸಿದರು. ಹಾಶಿಮ್ ಅಮ್ಲ(35), ಎಫ್‌ಡು ಪ್ಲೆಸಿಸ್(36), ಎವಿ ಡಿವಿಲಿಯರ್ಸ್(16) ಮತ್ತು ಜೆಪಿ ಡುಮಿನಿ (20) ಎರಡಂಕೆಯ ಕೊಡುಗೆ ನೀಡಿದರು.
ಇನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ ಮತ್ತು ಹಾಶಿಮ್ ಅಮ್ಲ ಮೊದಲ ವಿಕೆಟ್‌ಗೆ 17.3 ಓವರ್‌ಗಳಲ್ಲಿ 76 ರನ್ ದಾಖಲಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಆಡಿದ ಅಶ್ವಿನ್ 17.3ನೆ ಓವರ್‌ನಲ್ಲಿ ಅಮ್ಲ(35) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಅಮ್ಲ 54 ಎಸೆತಗಳನ್ನು ಎದುರಿಸಿದರು.3 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಪ್ಲೆಸಿಸ್ ತೆರವಾದ ಸ್ಥಾನಕ್ಕೆ ಆಗಮಿಸಿದರು. ಪ್ಲೆಸಿಸ್ ಮತ್ತು ಡಿ ಕಾಕ್ ಎರಡನೆ ವಿಕೆಟ್‌ಗೆ 40 ರನ್ ಸೇರಿಸಿದರು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅರ್ಧಶತಕ ದಾಖಲಿಸಿದರು. 53 ರನ್ (72ಎ, 4ಬೌ) ಗಳಿಸಿದ ಡಿ ಕಾಕ್ ಅವರು ಜಡೇಜ ಎಸೆತವನ್ನು ಎದುರಿಸಲಾರದೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಾಯಕ ಎಬಿಡಿ ವಿಲಿಯರ್ಸ್ ರನೌಟಾದರು. ವಿಲಿಯರ್ಸ್ ಔಟಾದ ಬಳಿಕ ದಕ್ಷಿಣ ಆಫ್ರಿಕ ಒತ್ತಡಕ್ಕೆ ಸಿಲುಕಿತು. ಮತ್ತೆ 51 ರನ್ ತಂಡದ ಖಾತೆಗೆ ಸೇರುವಷ್ಟರಲ್ಲಿ ದಕ್ಷಿಣ ಆಫ್ರಿಕ ಆಲೌಟಾಯಿತು. ಭಾರತದ ಪರ ಭುವನೇಶ್ವರ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ತಲಾ 2 ವಿಕೆಟ್ , ಆರ್.ಅಶ್ವಿನ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.







