ಅಟಾರ್ನಿ ಜನರಲ್ ಹುದ್ದೆ ತ್ಯಜಿಸಲು ರೋಹಟ್ಗಿ ನಿರ್ಧಾರ

ಹೊಸದಿಲ್ಲಿ, ಜೂ.11: ಅಟಾರ್ನಿ ಜನರಲ್ ಹುದ್ದೆಯಲ್ಲಿ ಮೂರು ವರ್ಷ ಪೂರೈಸಿದ್ದು ಇನ್ನು ಈ ಹುದ್ದೆಯಲ್ಲಿ ಮುಂದುವರಿಯಲು ಇಚ್ಛೆ ಇಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ತಿಳಿಸಿದ್ದಾರೆ.
ಖಾಸಗಿ ವೃತ್ತಿ ಮುಂದುವರಿಸಲು ಬಯಸಿರುವ ಕಾರಣ ದೇಶದ ಅತ್ಯುನ್ನತ ಕಾನೂನು ಅಧಿಕಾರಿ ಹುದ್ದೆ ತ್ಯಜಿಸಲು ನಿರ್ಧರಿಸಿರುವುದಾಗಿ ರೋಹಟ್ಗಿ ಸರಕಾರಕ್ಕೆ ತಿಳಿಸಿದ್ದಾರೆ. ಸರಕಾರ ರೋಹಟ್ಗಿ ಕಾರ್ಯಾವಧಿಯನ್ನು ಈ ತಿಂಗಳು ವಿಸ್ತರಿಸಿತ್ತು. ಆದರೆ ಎಷ್ಟು ಅವಧಿಯವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿರಲಿಲ್ಲ. 2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರೋಹಟ್ಗಿ ಅವರನ್ನು ಅಟಾರ್ನಿ ಜನರಲ್ ಹುದ್ದೆಗೆ ನಿಯುಕ್ತಿಗೊಳಿಸಲಾಗಿತ್ತು. ಹಲವು ತಕರಾರಿನ ಪ್ರಕರಣಗಳಲ್ಲಿ ಸರಕಾರದ ಪರ ವಾದ ಮಂಡಿಸಿದ್ದ ರೋಹಟ್ಗಿ, ಈ ಹಿಂದಿನ ಎನ್‌ಡಿಎ ಸರಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು.
Next Story





