ಸಿಆರ್‌ಝೆಡ್ ನಿಯಮ ಸಡಿಲಿಸಲು ಕೇಂದ್ರಕ್ಕೆ ಮನವಿ: ಸಚಿವ ಪ್ರಿಯಾಂಕ ಖರ್ಗೆ

ಮಂಗಳೂರು, ಜೂ.12: ದ.ಕ. ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳಿಗೆ 2.90 ಕೋ.ರೂ. ಅನುದಾನ ನೀಡಲಾಗಿದೆ. ಸಿಆರ್‌ಝೆಡ್ ನಿಯಮ ಸಡಿಲಿಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಪ್ರಶ್ನೆಗೆ ಅವರು ಉತ್ತರಿಸಿದರು.
ಬೆಂಗ್ರೆಯಲ್ಲಿ ನಿರ್ಮಿಸಲು ಉದ್ದೇಶಿದ ಗಾಲ್ಫ್ ಕ್ಲಬ್ ಯೋಜನೆ ವಿಳಂಬವಾಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ವಹಿಸಲಾದ ಸಂಸ್ಥೆಯೊಂದಿಗೆ 2012ರ ಸೆ.1ರಂದು ಮಾಡಿಕೊಂಡಿರುವ ಕರಾರಿನ ಪ್ರಕಾರ ಬಿಡ್ಡುದಾರರು, ಕೆಲಸ ಪ್ರಾರಂಭಿಸುವ ಮೊದಲು ವಿವರವಾದ ವಿನ್ಯಾಸವನ್ನು ಸಿದ್ಧಪಡಿಸಿ ಕರಾವಳಿ ನಿಯಂತ್ರಣ ವಲಯದ ಮತ್ತು ಇತರೆ ಅಗತ್ಯವಾದ ಅನುಮೋದನೆಗಳನ್ನು ಪಡೆಯಬೇಕಾಗಿರುತ್ತದೆ. ಕಾಮಗಾರಿಯನ್ನು ಪ್ರಾರಂಭಿಸದಿರುವ ಬಗ್ಗೆ ಗುತ್ತಿಗೆದಾರರ ಸಂಸ್ಥೆಯೊಂದಿಗೆ ಚರ್ಚಿಸಿ ಇಲಾಖೆ ಮಾಡಿಕೊಂಡಿರುವ ಕರಾರಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.





