ಏಕರೂಪ ಶಿಕ್ಷಣಕ್ಕೆ ಖಾಸಗಿ ಶಾಲೆಗಳ ಬೆಂಬಲವಿರಲಿ: ತನ್ವೀರ್ ಸೇಠ್

ಬೆಂಗಳೂರು, ಜೂ. 12: ರಾಜ್ಯದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿ ಮಾಡಲು ಸರಕಾರ ಉದ್ದೇಶಿಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.
ಸೋಮವಾರ ಚಾಮರಾಜಪೇಟೆಯ ರಾಯಲ್ ಕನ್‌ಕಾರ್ಡ್ ಇಂಟರ್ ನ್ಯಾಷನಲ್ ಸ್ಕೂಲ್ 7ನೆ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅತ್ಯಗತ್ಯ. ಶಿಕ್ಷಣದೊಂದಿಗೆ ಧಾರ್ಮಿಕ ಮೌಲ್ಯಗಳನ್ನು ಬೋಧಿಸುವ ಶಿಕ್ಷಣ ಪದ್ಧತಿಯನ್ನು ಅಳವಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ನಮ್ಮ ಸಮಾದಲ್ಲಿ ಶಿಕ್ಷಣ ವ್ಯವಸ್ಥೆ ಹಲವು ರೀತಿಯಲ್ಲಿ ವಿಂಗಡನೆಗೊಂಡಿದೆ. ಶ್ರೀಮಂತರಿಗೆ ಖಾಸಗಿ ಶಾಲೆ, ಬಡವರಿಗಾಗಿ ಸರಕಾರಿ ಶಾಲೆ, ಮಧ್ಯಮ ವರ್ಗದವರಿಗೆ ಅನುದಾನಿತ ಶಾಲೆಗಳು ಎನ್ನುವ ರೂಢಿ ಆರಂಭವಾಗಿದೆ. ಹೀಗಾಗಿ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ನೀಡುವ ಉದ್ದೇಶದಿಂದ ಕಾನೂನಿನಲ್ಲಿ ತಿದ್ದುಪಡಿ ತರಲು ಪಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲು ಸರಕಾರ ಚಿಂತಿಸುತ್ತಿದೆ. ಇದರೊಂದಿಗೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲಾಗಿದೆ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಹಣವಿದ್ದರೆ ಶಿಕ್ಷಣ ಎನ್ನುವಂತಾಗಿದೆ. ಜ್ಞಾನಕ್ಕೆ ಹಣ ಕೊಡಬೇಕೆ ಎನ್ನುವ ಪ್ರಶ್ನೆ ಉದ್ಭಸಿರುವುದು ಕಳವಳಕಾರಿಯಾದ ಅಂಶವೆಂದು ಅವರು ವಿಷಾದಿಸಿದರು.
ಸಮಾಜದಲ್ಲಿನ ಸರ್ವರೋಗಕ್ಕೆ ಶಿಕ್ಷಣವೇ ಮದ್ದು, ಶಿಕ್ಷಣ, ಜ್ಞಾನ ಯಾರ ಸ್ವತ್ತು ಅಲ್ಲ. ಈ ಬಾರಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಅನುಗುಣವಾಗಿ ಹಾಗೂ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುವ ಮೂಲಕ ನೈಜ ಫಲಿತಾಂಶಗಳನ್ನು ಸರಕಾರ ಪ್ರಕಟ ಮಾಡಿರುವುದು ಹೆಮ್ಮೆಯ ಸಂಗತಿಯೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.







