ಅರಣ್ಯ ಇಲಾಖೆಯಲ್ಲಿನ ಅವ್ಯವಹಾರ ತಡೆಯಲು ಆಗ್ರಹ
ಬೆಂಗಳೂರು, ಜೂ.12: ಅರಣ್ಯ ಇಲಾಖೆಯಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಟೆಂಡರ್‌ಗಳನ್ನು ನಿಮಯ ಬಾಹಿರವಾಗಿ ನಡೆಯುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ಹಾಗೂ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆಲ್ ಇಂಡಿಯಾ ಮಂಜ್ಲಸ್ ಎ ಇತ್ತೇಹಾದ್ ಉಲ್ ಮಸಲೀಮೀನ್ ಸಂಘಟನೆ ಆರೋಪಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಂಟಿ ಕಾರ್ಯದರ್ಶಿ ನೂರ್ ಮೊಹಮ್ಮದ್, ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಸಂಬಂಧಿಕ ಹೆಸರಿನಲ್ಲಿ ಅರಣ್ಯ ಗುತ್ತಿಗೆದಾರರ ಲೈಸೆನ್ಸ್ ನೀಡಿದ್ದಾರೆ. ಅಂತಹವರಿಗೆ ಟೆಂಡರ್ ನೀಡಿ ಇಲಾಖೆಯ ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗುತ್ತಿದೆ. ಈ ಮೂಲಕ ಸರಕಾರದ ಸಾವಿರಾರು ಕೋಟಿ ರೂ.ಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.
ಇಲಾಖೆಯ ಕಾರ್ಯ ಯೋಜನೆ ಮತ್ತು ಅನುಷ್ಠಾನ ಕಾರ್ಯಕ್ರಮಗಳ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ಹಣವನ್ನು ಗುಳುಂ ಮಾಡುತ್ತಿದ್ದಾರೆ. ಟೆಂಡರ್‌ನಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ(ಕೆಪಿಪಿಟಿ)ಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗುತ್ತಿದೆ. ತುರ್ತು ಕಾಮಗಾರಿ ಕೈಗೊಳ್ಳಬೇಕಾದರೆ ಟೆಂಡರ್‌ನಲ್ಲಿ ಭಾಗವಹಿಸುವುದಕ್ಕೆ ಗುತ್ತಿಗೆದಾರರಿಗೆ ಕನಿಷ್ಠ 8 ದಿನಗಳ ಅವಕಾಶವಿದೆ. ಆದರೆ, ರಾಯಚೂರಿನ ಉಪ ಸಂರಕ್ಷಣಾಧಿಕಾರಿ 2 ದಿನದಲ್ಲಿ ಟೆಂಡರ್ ಅಂತಿಮಗೊಳಿಸಿದ್ದಾರೆ. ಇದೇ ರೀತಿ ರಾಜ್ಯದ ಶೇ.80 ರಷ್ಟು ಭಾಗ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದಿಂದ ಅರಣ್ಯ ಬೆಳವಣಿಗೆಗಾಗಿ ಬಿಡುಗಡೆಯಾಗುವ ಹಣ ಸಮರ್ಪಕ ಬಳಕೆ ಆಗಬೇಕು. ಟೆಂಡರ್‌ನಲ್ಲಿ ಗುತ್ತಿಗೆದಾರ ಭಾಗವಹಿಸಬಾರದು ಎಂಬ ಉದ್ದೇಶದಿಂದ ಇ-ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ನೋಟಿಫಿಕೇಶನ್‌ನಲ್ಲಿ 2-3 ಷರತ್ತುಗಳಿವೆ. ಆದರೆ, ಕಾರ್ಯಾಲಯದಿಂದ ನೀಡುವ ನೋಟಿಫಿಕೇಷನ್‌ನಲ್ಲಿ 42-43 ಷರತ್ತುಗಳು ವಿಧಿಸಿದ್ದಾರೆ. ಇದರಿಂದ ಹೆಚ್ಚಿನ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಈ ಕುರಿತು ಅರಣ್ಯ ಸಚಿವ ರಮಾನಾಥ ರೈ, ಸರಕಾರದ ಅಧಿಕೃತ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ, ಉಡಾಫೆ ಉತ್ತರ ನೀಡುತ್ತಿದ್ದಾರೆ. ಈ ಮೂಲಕ ಸರಕಾರವೇ ನೇರವಾಗಿ ಈ ಅವ್ಯವಹಾರದಲ್ಲಿ ಭಾಗಿಯಾಗಿದೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ಕೂಡಲೇ ಸರಕಾರ ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.







