ರಾಜ್ಯ ಬಂದ್: ಕರವೇ ಕಾರ್ಯಕರ್ತರ ಬಂಧನ- ಬಿಡುಗಡೆ

ಉಡುಪಿ, ಜೂ.12: ರೈತರ ಸಾಲ ಮನ್ನಾ, ಮಹಾದಾಯಿ ಮತ್ತು ಮೇಕೆ ದಾಟು ಯೋಜನೆ ಜಾರಿಗೆ ಆಗ್ರಹಿಸಿ, ಕೇರಳ ಸರಕಾರದ ಕನ್ನಡ ವಿರೋಧಿ ನೀತಿಯನ್ನು ವಿರೋಧಿಸಿ ಮತ್ತು ಮರಳಿನ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಉಡುಪಿ ಕ್ಲಾಕ್ ಟವರ್ ಎದುರು ಧರಣಿ ನಡೆಸಲಾಯಿತು.
ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಮಾತನಾಡಿ, ಮರಳು ನಿಷೇಧ ಉಡುಪಿ ಜಿಲ್ಲೆ ಎದುರಿಸುತ್ತಿರುವ ಪ್ರಮುಖ ಸಮಸ್ಯೆ. ಇದಕ್ಕೆ ಜಿಲ್ಲಾಡಳಿತದ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ಮರಳಿನ ಪರವಾನಿಗೆಯನ್ನು ನೀಡದಿದ್ದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ದಿಗ್ಬಂಧನ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಹೆದ್ದಾರಿ ತಡೆಗೆ ಮುಂದಾದ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ಕರವೇ ಮುಖಂಡರಾದ ಶಾಹಿಲ್ ರಹ್ಮತುಲ್ಲಾ, ಅರವಿಂದ್ ಪಡುಬಿದ್ರೆ, ಪ್ರವೀಣ್ ಬಾರ್ಕೂರ್, ಆಸೀಫ್ ಪಡುಬಿದ್ರೆ, ಮಧುಕರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.





