ಸಿಡಬ್ಲೂಎಫ್‌ಐ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಕುಂದಾಪುರ, ಜೂ.12: ಕುಂದಾಪುರದಲ್ಲಿ ಜು.2 ಮತ್ತು 3ರಂದು ನಡೆ ಯುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಐಟಿಯು) ಮತ್ತು ಸಿಡಬ್ಲೂಎಫ್‌ಐ ಸಂಘಟನೆಯ 3ನೆ ರಾಜ್ಯ ಸಮ್ಮೇಳನದ ಲಾಂಛನವನ್ನು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಸೋಮವಾರ ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ಬಿಡುಗಡೆಗೊಳಿಸಿದರು.
ಮನೆ, ಸುರಕ್ಷತೆ, ಮೂರು ಸಾವಿರ ಖಚಿತ ಪಿಂಚಣಿ, ಸಾಮಾಜಿಕ ಭದ್ರತೆಗೆ ಆಗ್ರಹಿಸಿ ಮತ್ತು ಮರಳು ಅಭಾವ, ನೋಟು ಅಮಾನ್ಯಕರಣದ ಅವ್ಯವಸ್ಥೆ ವಿರುದ್ಧ ಹಮ್ಮಿಕೊಳ್ಳಲಾಗಿರುವ ಈ ಸಮ್ಮೇಳನವನ್ನು ಜು.2ರಂದು ಬೆಳಗ್ಗೆ 10ಗಂಟೆಗೆ ಸಿಡಬ್ಲೂಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೊಸದಿಲ್ಲಿ ಯ ದಿಬಂಜನ್ ಚಕ್ರವರ್ತಿ ಉದ್ಘಾಟಿಸುವರು ಎಂದು ವರಲಕ್ಷ್ಮಿ ತಿಳಿಸಿದರು.
ಸಮಾವೇಶದಲ್ಲಿ ಸಿಡಬ್ಲೂಎಫ್‌ಐ ರಾಷ್ಟ್ರಾಧ್ಯಕ್ಷ ಸಿಂಗಾರವೇಲು, ಕೇರಳ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ಪಿ.ಸಿ.ಜೋಸ್, ತೆಲಂಗಾಣ ಸಿಡಬ್ಲೂಎಫ್‌ಐ ಮುಖಂಡ ಕೊಟ್ಟಂರಾಜು, ರಾಜ್ಯ ಫೆಡರೇಶನ್ ಅಧ್ಯಕ್ಷ ವೀರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್ ಮೊದಲಾದವರು ಭಾಗ ವಹಿಸಲಿದ್ದಾರೆ. ರಾಜ್ಯದ 30 ಜಿಲ್ಲೆಗಳಿಂದ 250 ಮಂದಿ ಕಟ್ಟಡ ಕಾರ್ಮಿಕರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿ ಕಟ್ಟಡ ಕಾರ್ಮಿಕರು ಎದುರಿಸುತ್ತಿ ರುವ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದರು.
ವೇದಿಕೆಯಲ್ಲಿ ಸಿಐಟಿಯು ಮುಖಂಡರಾದ ಕೆ.ಶಂಕರ್, ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಯು.ದಾಸ ಭಂಡಾರಿ, ಕೋಶಾಧಿಕಾರಿ ಶೇಖರ ಬಂಗೇರ, ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮೊದಲಾದವರು ಉಪಸ್ಥಿತರಿದ್ದರು.







