‘ಚಿತ್ರಪ್ರಿಯರಿಗೆ ಚಿತ್ರಪ್ರಿಯನಿಂದ’ ಕೃತಿ ಬಿಡುಗಡೆ

ಉಡುಪಿ, ಜೂ. 11: ಉಡುಪಿ ಸುಹಾಸಂ ವತಿಯಿಂದ ಚಿತ್ರಕಲಾವಿದ ಪರ್ಕಳದ ಬಿ.ಸುಬ್ರಾಯ ಶಾಸ್ತ್ರಿ ಅವರ ‘ಚಿತ್ರಪ್ರಿಯರಿಗೆ ಚಿತ್ರಪ್ರಿಯನಿಂದ’ ಕೃತಿ ಬಿಡುಗಡೆ ಸಮಾರಂಭ ಉಡುಪಿ ಕಿದಿಯೂರು ಹೊಟೇಲಿನ ಮಹಾಜನ ಸಭಾಂಗಣದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಹಿರಿಯ ಚಿತ್ರಕಲಾವಿದ ರಮೇಶ್ ರಾವ್ ಮಾತ ನಾಡಿ, ಕರಾವಳಿಯಲ್ಲಿ ಸಾಕಷ್ಟು ಉತ್ತಮ ಕಲಾವಿದರಿದ್ದು, ಸರಕಾರ ಕಲೆಯನ್ನು ಪ್ರೋತ್ಸಾಹಿಸಿ ಚಿತ್ರಕಲಾ ವಿಶ್ವವಿದ್ಯಾನಿಲಯವನ್ನು ಇಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಇಂದು ಚಿತ್ರಕಲಾ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆ. ಚಿತ್ರಕಲೆಗೆ ಯಾವುದೇ ಶಾಸ್ತ್ರ, ಸಿದ್ಧಾಂತ, ವ್ಯಾಕರಣವಿಲ್ಲ. ಇದೊಂದು ವಿಚಿತ್ರ ಕಲೆ. ಕಲೆಯ ಮೂಲ ಆಶಯಗಳ ಬಗ್ಗೆ ಅರಿವು ಅಗತ್ಯ. ಈ ಎಲ್ಲ ವಿಚಾರಗಳ ಬಗ್ಗೆ ಅರಿವು ಇದ್ದವರು ಮಾತ್ರ ಉತ್ತಮ ಕಲಾವಿದನಾಗಲು ಸಾಧ್ಯ ಎಂದರು.
ಕೃತಿಯನ್ನು ಚುಟುಕು ಕವಿ ಎಚ್.ದುಂಡಿರಾಜ್ ಬಿಡುಗಡೆಗೊಳಿಸಿದರು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೃತಿಕಾರ ಬಿ. ಸುಬ್ರಾಯ ಶಾಸ್ತ್ರಿ ಪರ್ಕಳ ಉಪಸ್ಥಿತರಿದ್ದರು. ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ್ ಐತಾಳ್ ಸ್ವಾಗತಿಸಿದರು.
ಕಾರ್ಯದರ್ಶಿ ಎಚ್.ಗೋಪಾಲ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.





