ಮಕ್ಕಳ ದುರ್ಬಳಕೆಯನ್ನು ತಡೆಗಟ್ಟೋಣ: ನ್ಯಾ.ವೆಂಕಟೇಶ್ ನಾಯ್ಕಾ

ಉಡುಪಿ, ಜೂ.12: ದೇಶದ ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಅವರ ದುರ್ಬಳಕೆಯನ್ನು ತಡೆಗಟ್ಟಬೇಕಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕಾ ಟಿ. ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ವಕೀಲರ ಸಂಘ ಉಡುಪಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ನೆದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳು ದೇವರು ಸಮಾಜಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆ. ಇಂತಹ ಉತ್ತಮ ವರವನ್ನು ದೇಶದ ಅತ್ಯುತ್ತಮ ಸಂಪನ್ಮೂಲವನ್ನಾಗಿ ಮಾಡಿ ಸದ್ಬಳಕೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದವರು ತಿಳಿಸಿದರು.
ಹಲವಾರು ಕಾರಣಗಳಿಂದ ನಮ್ಮ ನಡುವೆ ಬಾಲ ಕಾರ್ಮಿಕ ಪದ್ಧತಿ, ಪಿಡುಗು ಬೆಳೆಯುತ್ತಿದೆ. ಈ ಪಿಡುಗನ್ನು ಚಿವುಟಿ ಹಾಕಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವು ಕಾನೂನು, ಕಾಯ್ದೆಗಳನ್ನು ರೂಪಿಸಲಾಗಿದೆ. ನ್ಯಾಯಾಂಗ ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ. ಅನಕ್ಷರತೆ, ಬಡತನಗಳಿಂದ ಕಠಿಣ ಪರಿಶ್ರಮ ಬೇಡುವ, ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳ ದುಡಿಮೆಯನ್ನು ನಿಷೇಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ನ್ಯಾಯಾಂಗ ಮಕ್ಕಳ ಹಕ್ಕು ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿ ಕಾರ್ಯಾಚರಿಸುತ್ತಿದೆ. 2016ರಲ್ಲಿ ಬಾಲಕಾರ್ಮಿಕ ಕಾಯ್ದೆಗೆ ಮಾಡಲಾದ ತಿದ್ದುಪಡಿಯಲ್ಲಿ ಉದ್ದಿಮೆಯಲ್ಲಿ ಬಾಲಕಾರ್ಮಿಕರ ನೇಮಕಾತಿ ಶಿಕ್ಷಾರ್ಹ ಅಪರಾಧವಾಗಿದೆ. ಭಾರತೀಯ ಸಂವಿಧಾನ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದು, ಬಾಲ ಕಾರ್ಮಿಕತೆಗೆ ಪ್ರಚೋದನೆ ನೀಡುವುದನ್ನು ಅಪರಾಧ ಎಂದು ಪರಿಗಣಿಸಿದೆ ಎಂದರು.
ಬಾಲ ಕಾರ್ಮಿಕ ನಿಷೇಧ ಕುರಿತು ಪ್ರತಿಜ್ಞೆ ಬೋಧಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಿದಲ್ಲಿ ಅವರು ಸಮಾಜ ಕಂಟಕರಾಗುವ ಅಪಾಯವಿದೆ. ಈ ಬಗ್ಗೆ ತಂದೆ- ತಾಯಿ ಎಚ್ಚರ ವಹಿಸಬೇಕು. ಮಕ್ಕಳು ಅಪರಾಧಗಳ ಪ್ರಕರಣಗಳಲ್ಲಿ ಭಾಗಿಯಾದರೆ ಹೆತ್ತವರಿಗೆ ಶಿಕ್ಷೆ ವಿಧಿಸುವ ಕಾನೂನಿನ ಬಗ್ಗೆ ವಿವರಿಸಿದರು. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಿ ಅವರನ್ನೂ ಸಮಾಜದ ಮುಖ್ಯ ವಾಹಿನಿಗೆ ತರಲು ಎಲ್ಲರ ಸಹಕಾರ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ. ಕೆ. ನಾರಾಯಣ, ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧಿಸಿ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಕ್ಕಳ ಬದುಕುವ ಹಕ್ಕು, ರಕ್ಷಣೆ ಹಕ್ಕು, ವಿಕಾಸಗೊಳ್ಳುವ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ಗೌರವಿಸಬೇಕು. ಉಡುಪಿ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಎಂದು ಘೋಷಿಸುವಲ್ಲಿ ಸರ್ವರೂ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬಾಲ ಕಾರ್ಮಿಕನಾಗಿದ್ದು, ಬಿಡುಗಡೆಗೊಂಡು ಶಿಕ್ಷಣ ಪಡೆಯುತ್ತಿರುವ ರಾಜು ಎಂಬ ವಿದ್ಯಾರ್ಥಿಯನ್ನು ಗೌರವಿಸಲಾಯಿತು. ಕಾರ್ಮಿಕ ಇಲಾಖೆ ಒಂದನೇ ವೃತ್ತದ ಕಾರ್ಮಿಕ ನಿರೀಕ್ಷಕ ರಾಮಮೂರ್ತಿ ಸ್ವಾಗತಿಸಿ, ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ವಂದಿಸಿದರು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಯೋಜನಾ ನಿರ್ದೇಶಕ ಕಾರ್ಯಕ್ರಮ ನಿರೂಪಿಸಿದರು.







