ರಫ್ತು ಕಂಪೆನಿಗಳ ಕಸಾಯಿಖಾನೆ- ಗೋಶಾಲೆಗಳ ನಡುವಿನ ಒಳಒಪ್ಪಂದ ಅರ್ಥ ಮಾಡಿಕೊಳ್ಳಿ: ಭಾಸ್ಕರ ಪ್ರಸಾದ್

ಕುಂದಾಪುರ, ಜೂ.12: ಪ್ರತಿವರ್ಷ ಗೋಶಾಲೆಗಳಿಗೆ ನೂರಾರು ಸಂಖ್ಯೆಯ ದನಗಳು ಹೋಗುತ್ತಿರುತ್ತವೆ. ಆದರೆ ಅವು ಎಲ್ಲಿ ಹೋಗುತ್ತವೆ ಎಂಬುದರ ಬಗ್ಗೆ ಲೆಕ್ಕವೇ ಇಲ್ಲ. ಅದೇ ರೀತಿ ದನದ ಮಾಂಸ ರಫ್ತು ಮಾಡುವ ಕಂಪೆನಿಗಳ ಕಸಾಯಿಖಾನೆಗಳಿಗೆ ಕಟಾವು ಮಾಡಲು ಎಲ್ಲಿಂದ ದನ ಬರುತ್ತವೆ ಎಂಬ ಲೆಕ್ಕಾಚಾರ ಕೂಡ ಈವರೆಗೂ ಬಹಿರಂಗ ಪಡಿಸಿಲ್ಲ. ಹೀಗಾಗಿ ರಫ್ತು ಕಂಪೆನಿಯ ಕಸಾಯಿಖಾನೆಗಳಿಗೂ ಈ ಗೋಶಾಲೆಗಳಿಗೂ ಇರುವ ಒಳಒಪ್ಪಂದವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ದಲಿತ-ದಮನಿತ ಸ್ವಾಭಿಮಾನಿ ಹೋರಾಟ ಸಮಿತಿಯ ಸಂಚಾಲಕರಾದ ಬಿ.ಆರ್.ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
ಸಂಘ ಪರಿವಾರದ ನೈತಿಕ ಪೊಲೀಸ್‌ಗಿರಿಯನ್ನು ಖಂಡಿಸಿ, ಮೊವಾಡಿಯಲ್ಲಿ ಕೊರಗ ಯುವಕರ ಮೇಲೆ ಹಾಕಲಾಗಿರುವ ಮೊಕದ್ದಮೆ ಹಿಂತೆಗೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಸೋಮವಾರ ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾದ ಮೊವಾಡಿ ಚಲೋ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಅವರು ಮಾತನಾಡುತಿದ್ದರು.
ದನದ ಮಾಂಸದ ಊಟ ಮಾಡಿದರೆಂಬ ಒಂದು ಕಾರಣಕ್ಕೆ ಹಲ್ಲೆ ಮಾಡುವ ಸಂಘಪರಿವಾರದ ಕಾರ್ಯಕರ್ತರೇ ಈ ದೇಶದಿಂದ ಪ್ರತಿದಿನ ಒಂದೂವರೆ ಲಕ್ಷ ಟನ್ ದನದ ಮಾಂಸ ರಫ್ತು ಆಗುತ್ತಿರುವಾಗ ನಿಮ್ಮ ದನದ ಪರವಾದ ಪ್ರೀತಿ ಎಲ್ಲಿ ಹೋಗುತ್ತದೆ. ಈ 2ಲಕ್ಷ ಟನ್ ಮಾಂಸಕ್ಕಾಗಿ ಪ್ರತಿದಿನ 2-3ಲಕ್ಷ ದನಗಳ ಕಟಾವು ಮಾಡಬೇಕಾಗುತ್ತದೆ. ಅದನ್ನು ಪ್ರಶ್ನಿಸುವ ತಾಕತ್ತು ನಿಮಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಗೋಹತ್ಯೆ ನಿಷೇಧವಾದರೆ ಒಂದು ತಿಂಗಳಿಗೆ ಈ ದೇಶದಲ್ಲಿ 90 ಲಕ್ಷಕ್ಕೂ ಅಧಿಕ ದನ ಬೀದಿಗೆ ಬರುತ್ತವೆ. ಒಂದು ವರ್ಷದಲ್ಲಿ ಕೋಟ್ಯಂತರ ದನಗಳು ಬೀದಿಯಲ್ಲಿರುತ್ತವೆ. ಇಲ್ಲಿ ಜನ ಊಟ ಇಲ್ಲದೆ, ವೈದ್ಯಕೀಯ ಚಿಕಿತ್ಸೆ ಇಲ್ಲದೆ ಸಾಯುತ್ತಿರುವ ಸಮಯದಲ್ಲ್ಲಿ ಕೋಟ್ಯಂತರ ದನಗಳು ಬೀದಿಗೆ ಬಂದರೆ ಯಾವ ಸ್ಥಿತಿ ಎದುರಾಗಬಹುದು ಎಂದು ಊಹಿಸುವುದು ಕಷ್ಟ. ಇಡೀ ದೇಶದ ಬಜೆಟ್ ದನಗಳನ್ನು ಸಾಕಲು ಬೇಕಾಗಬಹುದು ಎಂದು ಅವರು ಟೀಕಿಸಿದರು.
ಕೇಂದ್ರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲು ಸಾಧ್ಯವಿಲ್ಲ. ಈ ಮನುಷ್ಯ ವಿರೋಧಿ ಕಾನೂನು ಜಾರಿ ಮಾಡದಂತೆ ನಾವು ತಡೆಯುತ್ತೇವೆ. ಒಂದು ವೇಳೆ ಈ ಕಾನೂನು ಜಾರಿಯಾದರೂ ಇಲ್ಲಿ ಮನುಷ್ಯ ಸಂತತಿ ಉಳಿಯಲು ಸಾಧ್ಯ ವಿಲ್ಲ. ಆದುದರಿಂದ ಸಂಘಪರಿವಾರ ಮೊದಲು ಈ ಅನಿಷ್ಟ ರಾಜಕಾರಣವನ್ನು ಬಿಡಬೇಕು ಎಂದು ಅವರು ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಮಾತನಾಡಿ, ಮೊವಾಡಿಯ ಕೊರಗರ ಮದುವೆ ನಿಶ್ಚಿತಾರ್ಥ ಸಮಾರಂಭಕ್ಕೆ ದಾಳಿ ನಡೆಸಿದ ಹಿಂದುತ್ವದ ಗೂಂಡಾ ಪಡೆ, ಬೇರೆಯವರ ಮನುಷ್ಯತ್ವವನ್ನು ನಿರಾಕರಿಸುವುದರ ಜೊತೆಗೆ ತಮ್ಮ ಮನುಷ್ಯತ್ವವನ್ನು ತಾವೇ ನಿರಾಕರಿಸುತ್ತಿವೆ. ಈ ದಾಳಿಯು ಇಂದು ದೇಶದಾದ್ಯಂತ ಹಿಂದೂತ್ವ ಪಡೆಗಳು ಅಲ್ಪಸಂಖ್ಯಾತರ, ದಲಿತರ, ಹಿಂದುಳಿದವರ್ಗದ ಮೇಲೆ ನಡೆಸುತ್ತಿರುವ ಹಲ್ಲೆಯ ಒಂದು ಭಾಗ ವಾಗಿದೆ. ದಾದ್ರಿ ಘಟನೆ ಮತ್ತು ಮೊವಾಡಿ ಘಟನೆ ಹಿಂಸೆಯ ಪ್ರಮಾಣದಲ್ಲಿ ಅಲ್ಲದಿದ್ದರೂ ಸ್ವರೂಪದಲ್ಲಿ ಒಂದೇ ಆಗಿದೆ ಎಂದು ಟೀಕಿಸಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಸಂತ್ರಸ್ತೆ ಕೊರಗ ಮಹಿಳೆ ಶಕುಂತಲಾ, ಸುಂದರ ಬೆಳು ವಾಯಿ, ವಿಶ್ವನಾಥ ಪೇತ್ರಿ ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ದಸಂಸ ಮಹಾ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ತಲ್ಲೂರು ವಹಿಸಿದ್ದರು. ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಹಾಗೂ ಶ್ಯಾಮ ರಾಜ್ ಭಿರ್ತಿ ಸಮಾವೇಶದ ನಿರ್ಣಯಗಳನ್ನು ಮಂಡಿಸಿದರು.
ವೇದಿಕೆಯಲ್ಲಿ ಮುಖಂಡರಾದ ಶೇಖರ ಹೆಜಮಾಡಿ, ಪ್ರಶಾಂತ ಜತ್ತನ್ನ, ಚಂದ್ರ ಅಲ್ತಾರು, ಮೈಕಲ್ ಪಿಂಟೊ, ಶಾಹಬಾನ್ ಹಂಗಳೂರು, ಹನೀಫ್ ಗಂಗೊಳ್ಳಿ, ಸುಂದರ ಕಪ್ಪೆಟ್ಟು, ಶ್ಯಾಮ ಸುಂದರ್ ತೆಕ್ಕಟ್ಟೆ, ಬೊಗ್ರ ಕೊರಗ, ಚಾರ್ಲ್ಸ್ ಆ್ಯಬ್ಲರ್, ಇದ್ರೀಸ್ ಹೂಡೆ, ಮಹಮ್ಮದ್ ಯಾಸೀನ್, ಗೌರಿ ಕೆಂಜೂರು ಮೊದಲಾದವರು ಉಪಸ್ಥಿತರಿದ್ದರು.
ದಲಿತ ಚಿಂತಕ ನಾರಾಯಣ ಮಣೂರು ಪ್ರಾಸ್ತಾವಿಕವಾಗಿ ಮಾತನಾಡಿ ದರು. ವಿನೋದ್ ಕ್ರಾಸ್ತಾ ಸ್ವಾಗತಿಸಿದರು. ಎಸ್.ಎಸ್. ಪ್ರಸಾದ್ ವಂದಿಸಿದರು. ಅನಂತ ಮಚ್ಚಟ್ಟು ಹಾಗೂ ವಸಂತ ವಂಡ್ಸೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ದೌರ್ಜನ್ಯಕ್ಕೊಳಗಾದ ಕೊರಗ ಸಮುದಾಯದ ಶಕುಂತಲಾ ಮನೆಯಿಂದ ಹೊರಟ ಮೊವಾಡಿ ಚಲೋ ಜಾಥಕ್ಕೆ ಕರ್ನಾಟಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ರೆ.ಫಾ.ವಿಲಿಯಂ ಮಾರ್ಟೀಸ್ ಚಾಲನೆ ನೀಡಿದರು. ಬಳಿಕ ಆನಗೋಡು, ತ್ರಾಸಿ ಮೂಲಕ ವಿವಿಧ ವಾಹನಗಳ ಮೂಲಕ ಹೊರಟ ಜಾಥಾವು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು.
ತಾಕತ್ತಿದ್ದರೆ ದನದ ಮಾಂಸ ರಫ್ತು ನಿಷೇಧಿಸಿ
ದೇಶದ ಆರು ಪ್ರಮುಖ ದನದ ಮಾಂಸ ರಪ್ತು ಕಂಪೆನಿಗಳನ್ನು ನಡೆಸುತ್ತಿರುವ ವರು ಮುಸ್ಲಿಮರಲ್ಲ. ಅದರ ಮಾಲಕರೆಲ್ಲ ಮೇಲ್ಜಾತಿಗೆ ಸೇರಿದ ಬನಿಯಾಗಳು, ಮಾರ್ವಡಿಗಳು, ಬ್ರಾಹ್ಮಣರು. ಇದರಿಂದ ಬರುವ ಆದಾಯದಲ್ಲಿ ಬಿಜೆಪಿ ಪಕ್ಷ ಪ್ರತಿವರ್ಷ ದೇಣಿಗೆ ರೂಪದಲ್ಲಿ ಕೋಟ್ಯಂತರ ರೂ. ಹಣ ಪಡೆಯುತ್ತಿದೆ. ಮಾತೃ ಸ್ವರೂಪಿ ದನವನ್ನು ವಿದೇಶಕ್ಕೆ ಮಾರಿ ಅಲ್ಲಿಂದ ಬರುವ ಹಣದಿಂದ ರಾಜಕಾರಣ ಮಾಡುತ್ತ ಮೆರೆಯುತ್ತಿರುವ ಬಿಜೆಪಿ, ಓಟಿನ ರಾಜಕರಣಕ್ಕಾಗಿ ಈ ದೇಶದ ಶೂದ್ರ, ದಲಿತ ಸಮುದಾಯದ ಯುವಕರಿಗೆ ದನದಲ್ಲಿ ಮಾತೃ ಪ್ರೇಮದ ಭ್ರಮೆಯನ್ನು ಮೂಡಿಸಿ ದನದ ರಕ್ಷಣೆಗಾಗಿ ಕೊಲೆಗಡುಕರನ್ನಾಗಿ ಮಾಡುತ್ತಿದೆ. ತಾಕತ್ತಿದ್ದರೆ ಮೊದಲು ದನದ ಮಾಂಸ ರಫ್ತು ಆಗುವುದನ್ನು ನಿಷೇಧಿಸಿ ಎಂದು ಭಾಸ್ಕರ್ ಪ್ರಸಾದ್ ಸವಾಲು ಹಾಕಿದರು.
ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ಕಾನೂನು: ಅಶೋಕ್
ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಜಾನುವಾರು ಮಾರಾಟ ನಿಯಂತ್ರಣ ಕಾಯಿದೆಯು ಪ್ರಜಾಪ್ರಭುತ್ವ ಹಾಗೂ ಅಂಬೇಡ್ಕರ್ ಆಶಯದ ಸಂವಿಧಾನ ವಿರೋಧಿಯಾಗಿದೆ. ಮಾತ್ರವಲ್ಲದೆ ಇಡೀ ದೇಶದ ಹಿಂದೂಗಳ ಮೇಲೆ ಪ್ರಭಾವ ಬೀರುವ ಕಾನೂನು. ಇದರಿಂದ ಕೋಳಿ ಕುರಿಗಳ ಮಾಂಸಗಳ ಬೆಲೆ ಏರಿಕೆಯಾಗಿ ಬಡವರು ಪೌಷ್ಠಿಕಾಂಶ ಇಲ್ಲದೆ ಸಾಯುವಂತೆ ಮಾಡುತ್ತದೆ. ಹೀಗಾಗಿ ಇದು ಆಹಾರ ಮಾತ್ರವಲ್ಲ ಇಡೀ ಭಾರತದ ಸಮಾಜದ ಪ್ರಶ್ನೆ ಯಾಗಿದೆ ಎಂದು ಕೆ.ಎಲ್.ಅಶೋಕ್ ಹೇಳಿದರು.
ಬಿಲ್ಲವ ಯುವಕರೇ ಪುರೋಹಿತಶಾಹಿ, ಮೇಲುಕೀಳನ್ನು ಸಮರ್ಥಿಸಿ ಕೊಳ್ಳುವ ಬ್ರಾಹ್ಮಣ್ಯವನ್ನೇ ಬಂಡವಾಳವಾಗಿಸಿಕೊಂಡ ಈ ಸಂಘಪರಿವಾರಕ್ಕೆ ಸೇರಬೇಡಿ. ಸಂಘಪರಿವಾರದ ಬಲೆಗೆ ಸಿಕ್ಕಿ ಬಲಿಪಶುಗಳಾಗಬೇಡಿ. ನಾವು ಬಲಿಪಶುಗಳಾದ ಸಮುದಾಯ. ಆದರೆ ಬಲಿ ಕೊಡುವ ಸಂಘಟನೆಗಳಲ್ಲಿ ನಾವಿದ್ದರೆ ನಮ್ಮ ಮುಂದಿನ ದಿನಗಳು ಭಯಾನಕವಾಗಿ ಕಾಣಲಿದೆ ಎಂದರು.
ಗೋಹತ್ಯೆ ಕಾನೂನು ಅಲ್ಲ. ಜನಹತ್ಯೆ ಕಾನೂನು. ಇಂತಹ ದಾಳಿ ಭಾರತ ಉದ್ದಗಲಕ್ಕೂ ನಡೆಯುತ್ತಿದೆ. ಉತ್ತರ ಪ್ರದೇಶದ ಬೃಹತ್ ಸಂಖ್ಯೆಯ ಯುವಕರ ಪಡೆ ಕಟ್ಟಿಕೊಂಡ ಭೀಮ ಆರ್ಮಿ ಮುಂದೆ ಕರ್ನಾಟಕಕ್ಕೂ ಪ್ರವೇಶ ಮಾಡ ಬೇಕಾಗುತ್ತದೆ. ಇದೇ ರೀತಿಯ ದಾಳಿ ಮುಂದುವರೆದರೆ ಭೀಮ ಆರ್ಮಿ ಭಾರತಾದ್ಯಂತ ಆರಂಭಿಸಬೇಕಾಗುತ್ತದೆ. ದೇಶದ ಬೀದಿ ಬೀದಿಗಳಲ್ಲಿ ಗೋ ಭಯೋತ್ಪಾದಕರ ವಿರುದ್ಧ ರಣ ಸಂಗ್ರಾಮ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.







