ಭಟ್ಕಳದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಭಟ್ಕಳ, ಜೂ. 12: ತಾಲೂಕಿನ ಶ್ರೀ ಗುರುಸುಧೀಂದ್ರ ಬಿ.ಬಿ.ಎ. ಬಿ.ಸಿ.ಎ. ಕಾಲೇಜು ಅಡಿಟೋರಿಯಂನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ತಾಲೂಕಾ ಆಡಳಿತ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ತಾಲೂಕಾ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಭಟ್ಕಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ತಾಲೂಕು ಕಾನೂನು ಸೇವಾ ಸಮಿತಿ ಚೇರ್‌ಮೆನ್ ಹಾಗೂ ಹಿರಿಯ ಸಿವಿಲ್ ಜಡ್ಜ ರಾಘವೇಂದ್ರ ಡಿ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಿ ಅವರು ಒಂದೊಳ್ಳೆ ನಾಗರಿಕರಾಗಬೇಕೆಂಬ ಉದ್ದೇಶ ಈ ದಿನಾಚರಣೆಯದ್ದಾಗಿದೆ. ಬಾಲ ಕಾರ್ಮಿಕರಾಗಿಯೆ ದುಡಿಯುವತ್ತ ಅವರ ಜೀವನ ಹಾಳಾಗಬಾರದು. ವಿದ್ಯಾಭ್ಯಾಸ ಸಿಗುವ ವಯಸ್ಸಿನಲ್ಲಿ ಸರಿಯಾದ ವಿದ್ಯೆ ಸಿಗಬೇಕು. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಹಳ್ಳಿ ಸೇರಿದಂತೆ ನಗರದಾದ್ಯಂತ ಇಂತಹ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ತಾಲೂಕಾ ಹಿರಿಯ ವಕೀಲರಾದ ಆರ್.ಆರ್.ಶ್ರೇಷ್ಟಿ ಬಾಲ ಕಾರ್ಮಿಕರಾಗಲು ಮುಖ್ಯ ಕಾರಣ ಬಡತನ, ಅಜ್ಞಾನ ಹಾಗೂ ಕುಟುಂಬ ನಿರ್ವಹಣೆ ಸಾಧ್ಯವಾಗದ ಸಂಧರ್ಭದಲ್ಲಿ ಮಕ್ಕಳನ್ನು ಕೆಲಸಕ್ಕೆ ಸೇರಿಸುವ ಕಾರ್ಯ ಪಾಲಕರು ಮಾಡುತ್ತಾರೆ. ಆದರೆ ಈಗ ಶಿಕ್ಷಣ ನೀತಿ ಬದಲಾಗಿದ್ದು, 14ನೇ ವರ್ಷಕ್ಕೆ ಕಡ್ಡಾಯ ಶಿಕ್ಷಣ ಸಿಗಬೇಕು. ಶಿಕ್ಷಣದಿಂದ ಯಾವೊಬ್ಬ ಮಗು ಸಹ ವಂಚಿತವಾಗಬಾರದು ಎಂಬ ಕಾನೂನು ಬಾಲ ಕಾರ್ಮಿಕ ಪದ್ದತಿಯನ್ನು ನಿಲ್ಲಿಸಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಬಾಲಕಾರ್ಮಿಕ ಪ್ರಬಂದ ಸ್ಪರ್ದೆಯ ವಿಜೇತ ವಿಧ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಎಮ್.ಎನ್.ಮಂಜುನಾಥ, ತಹಶೀಲ್ದಾರ್ ವಿ.ಎನ್.ಬಾಡಕರ್, ಭಟ್ಕಳ ತಾಲೂಕಾ ಸಹಾಯಕ ಸರ್ಕಾರಿ ಅಭಿಯೋಜಕಿ ಶ್ರೀಮತಿ ಇಂದಿರಾ ನಾಯ್ಕ, ಭಟ್ಕಳದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಹನುಮಂತರಾವ್ ಆರ್. ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ, ಭಟ್ಕಳ ವಕೀಲ ಸಂಘದ ಅಧ್ಯಕ್ಷ ರಾಜವರ್ಧನ್ ಎನ್ ನಾಯ್ಕ ವಕಿಲರುಗಳಾದ ಜಿ.ಟಿ ನಾಯ್ಕ, ಕಮಲಾಕರ್ ಭೈರು ಮನೆ, ದುರ್ಗಪ್ಪ ಸಿದ್ದನ ಮನೆ, ಆರ್.ಜಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.







