ವಾಯು ವಿಹಾರಕ್ಕೆ ತೆರಳಿದ್ದ ಯುವಕನ ಕೊಲೆ
ಮಂಡ್ಯ, ಜೂ.12: ವಾಯು ವಿಹಾರಕ್ಕೆ ತೆರಳಿದ್ದ ಯುವಕನನ್ನು ಆರು ಜನರ ಗುಂಪು ಮಾರಕಾಸ್ತ್ರದಿಂದ ಕೊಲೆಗೈದು ಪರಾರಿಯಾಗಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ಕಲ್ಯಾಣ ಮಂಟಪದ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ತ್ಯಾಗರಾಜ ರಸ್ತೆ ನಿವಾಸಿ ಪತ್ರ ಬರಹಗಾರ ಬಸವರಾಜು ಅರಸು ಅವರ ಪುತ್ರ ಫಣೀಶ್ (21) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಈತನ ಜತೆಯಲ್ಲಿದ್ದ ಸ್ನೇಹಿತ ಗಿರೀಶ್ ಎಂಬುವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫಣೀಶ್ ಮತ್ತು ಸ್ನೇಹಿತ ಗಿರೀಶ್ ವಾಯು ವಿಹಾರ ಮುಗಿಸಿಕೊಂಡು ಬರುತ್ತಿದ್ದ ವೇಳೆ ಸ್ಕಾರ್ಪಿಯೋ ವಾಹನದಲ್ಲಿ ಬಂದ ಆರು ಜನರ ಗುಂಪು ಮಾರಕಾಸ್ತ್ರಗಳಿಂದ ಫಣೀಸ್ ಮೇಲೆ ಹಲ್ಲೆ ನಡೆಸಿ ಪರಾರಿಯಾಯಿತು ಎನ್ನಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಹೆಚ್ಚುವರಿ ವರಿಷ್ಠಾಧಿಕಾರಿ ಸವಿತಾ, ಡಿವೈಎಸ್ಪಿ ಮ್ಯಾಥ್ಯೂ ಥಾಮಸ್, ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರೀಕಾಂತ್, ಪಿಎಸ್‌ಐ ರವಿಕುಮಾರ್, ಅಯ್ಯನಗೌಡ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೊಲೆಯಾದ ಫಣೀಶ್ ತಂದೆ ಬಸವರಾಜು ಅರಸು ಪ್ರಕಾರ ಹಳೆ ದ್ವೇಷವೇ ಕೊಲೆಗೆ ಕಾರಣವೆನ್ನಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







