ಕರಾಟೆ ಶಿಕ್ಷಕನ ಅಕಾಲಿಕ ಮರಣಕ್ಕೆ ಶ್ರದ್ಧಾಂಜಲಿ

ಭಟ್ಕಳ, ಜೂ. 12: ಇತ್ತೀಚಿಗೆ ಮೆದುಳು ಸಂಬಂಧಿ ಕಾಯಿಲೆಯಿಂದ ಮರಣ ಹೊಂದಿದ ತಾಲೂಕಿನ ಕರಾಟೆ ಶಿಕ್ಷಕ ವಾಸು ನಾಯ್ಕರಿಗೆ ಇಲ್ಲಿನ ನ್ಯೂ ಇಂಗ್ಲಿಷ್ ಶಾಲೆಯ ಸಭಾಭವನದಲ್ಲಿ ಶೋಟೋಕಾನ್ ಕರಾಟೆ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಶ್ರದ್ಧಾಂಜಲಿ ನಡೆಯಿತು.
2 ನಿಮಿಷ ಮೌನಾಚಾರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಾಸುರವರ ಭಾವಚಿತ್ರಕ್ಕೆ ಕರಾಟೆ ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಹೂ ಹಾಕಿ ನಮನ ಸಲ್ಲಿಸಿದರು. ಕುಮಟಾದ ಕರಾಟೆ ಶಿಕ್ಷಕ ಹಾಗೂ ನ್ಯಾಯವಾದಿ ಅರವಿಂದ ನಾಯ್ಕ ಮಾತನಾಡಿ, ವಾಸು ನಾಯ್ಕರು ಭಟ್ಕಳದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಣವನ್ನು ಕಲಿಸಿ ಜನಾನುರಾಗಿಯಾಗಿದ್ದರು. ಅವರು ಕೇವಲ ಶಿಕ್ಷಕರಾಗದೇ ಸಮಾಜದಲ್ಲಿ ಅನೇಕರಿಗೆ ಆಪತ್ ಕಾಲದಲ್ಲಿ ಹಣದ ರೂಪದಲ್ಲಿ ನೆರವನ್ನೂ ನೀಡಿದ್ದರು. ಇವರ ಅಕಾಲಿಕ ಮರಣದಿಂದ ಅವರ ಕುಟುಂಬ ಸಂಕಷ್ಟಕ್ಕೀಡಾಗಿದ್ದು ಅವರಿಂದ ಪಡೆದ ಹಣವನ್ನು ಕುಟುಂಬದವರಿಗೆ ನೀಡುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಿರಣ್ ಶಾನುಭಾಗ ಮಾತನಾಡಿ, 1993ರಿಂದಲೇ ಇವರು ಭಟ್ಕಳದಲ್ಲಿ ಕರಾಟೆ ಕಲೆಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತ ಬಂದಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕರಾಟೆ ಶಿಕ್ಷಣವನ್ನು ನೀಡಿದ್ದರು ಎಂದು ಸ್ಮರಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ, ಫ್ರೇಂಡ್ಸ ಜಿಮ್‌ನ ಮಾಲಕ ವೆಂಕಟೇಶ ನಾಯ್ಕ, ವಾಸು ನಾಯ್ಕರ ಸರಳತೆ, ವ್ಯಕ್ತಿತ್ವವನ್ನು ಶ್ಲಾಘಿಸಿದರು. ಕಾರವಾರದ ಕರಾಟೆ ಮುಖ್ಯ ಶಿಕ್ಷಕ ಸಿ. ರಾಜನ್, ಸುರೇಶ ಮೊಗೇರ, ಮನೋಜ್ ನಾಯ್ಕ, ಈಶ್ವರ ನಾಯ್ಕ, ಸೇರಿದಂತೆ ಜಿಲ್ಲೆಯ ವಿವಿದೆಡೆಯಿಂದ ಬಂದ ಅನೇಕ ಪ್ರಮುಖರು ಉಪಸ್ಥಿತರಿದ್ದರು. ವಾಸುರವರ ಸ್ಮರಣಾರ್ಥ ನ್ಯೂ ಇಂಗ್ಲಿಷ್ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಮಾವಿನ ಗಿಡ ನೆಟ್ಟು ಶ್ರದ್ಧಾಂಜಲಿ ಸಲ್ಲಿಸಿದರು.







