ಗೀತಾ ಶಿವರಾಜ್ ಕುಮಾರ್ ಗೆ ಕಾಂಗ್ರೆಸ್ ಗಾಳ?

ಬೆಂಗಳೂರು, ಜೂ.12: ಡಾ.ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕದ ಕಾಂಗ್ರೆಸ್ ಪಕ್ಷ ಮುಂದಾಗಿದೆ. ಈ ಉದ್ದೇಶಕ್ಕಾಗಿಯೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದಿವಂಗತ ರಾಜ್ ಕುಮಾರ್ ಮನೆಗೆ ಇಂದು ಭೇಟಿ ನೀಡಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.
ಪಾರ್ವತಮ್ಮ ರಾಜ್ ಕುಮಾರ್ ಕಳೆದ ಮೇ 31ರಂದು ನಿಧನರಾಗಿದ್ದರು. ಅವರು ನಿಧನರಾಗಿ ಹನ್ನೆರಡು ದಿನಗಳ ಬಳಿಕ ರಾಹುಲ್ ಗಾಂಧಿ ಅವರ ಮನೆಯ ಮಂದಿಯನ್ನು ಇಂದು ಭೇಟಿಯಾಗಿ ಸಾಂತ್ವನ ಹೇಳಿದರು. ರಾಜಕೀಯ ಲಾಭಕ್ಕಾಗಿ ಪಾರ್ವತಮ್ಮ ನಿವಾಸಕ್ಕೆ ರಾಹುಲ್ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಡಾ.ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿ. ಅವರನ್ನು ಇದೀಗ ಕಾಂಗ್ರೆಸ್ ಗೆ ಸೇರಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಗೀತಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಚಿಸಿದೆ ಎನ್ನಲಾಗಿದೆ.
ರಾಜ್ ಕುಮಾರ್ ನಿವಾಸಕ್ಕೆ ತೆರಳಿದ ರಾಹುಲ್ ಗಾಂಧಿ ಅವರಿಗೆ ಗೀತಾ ಅವರನ್ನು ಸಚಿವ ಡಿ.ಕೆ.ಶಿವಕುಮಾರ್ ಪರಿಚಯಿಸಿದರು. ಆಗ ರಾಹುಲ್ “ಓಕೆ ‘ಎಂದಷ್ಟೇ ಹೇಳಿದರು.
ಗೀತಾ ಶಿವರಾಜ್ ಕುಮಾರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಅನುಭವಿಸಿದ್ದರು.







