ಜೂ.14: ವಿವೇಕಾನಂದ ವಿದ್ಯಾವರ್ಧಕ ಸಂಘದ ನರೇಂದ್ರ ಪದವಿಪೂರ್ವ ಕಾಲೇಜು ಲೋಕಾರ್ಪಣೆ
ಪುತ್ತೂರು, ಜೂ.12: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ 57ನೇ ವಿದ್ಯಾಸಂಸ್ಥೆಯಾಗಿ ನರೇಂದ್ರ ಪದವಿ ಪೂರ್ವ ಕಾಲೇಜು ಇಲ್ಲಿನ ತೆಂಕಿಲದ ವಿವೇಕನಗರದಲ್ಲಿ ಜೂ.14ರಂದು ಲೋಕಾರ್ಪಣೆಗೊಳ್ಳುವುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಅವರು ತಿಳಿಸಿದರು.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1965ರಲ್ಲಿ ವಿವೇಕಾನಂದ ಕಾಲೇಜನ್ನು ಆರಂಭಿಸುವುದರೊಂದಿಗೆ ತನ್ನ ಶೈಕ್ಷಣಿಕ ಸೇವಾ ಕಾರ್ಯಗಳನ್ನು ಆರಂಭಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಹಲವಾರು ಮಂದಿಯ ಬೇಡಿಕೆಯಂತೆ ತೆಂಕಿಲದ ವಿವೇಕನಗರದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನೊಳಗೊಂಡ ನರೇಂದ್ರ ಪದವಿ ಪೂರ್ವ ಕಾಲೇಜು ಆರಂಭಿಸಿದೆ ಎಂದರು.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ದಾವಣಗೆರೆ ಪಾಂಡುಮಟ್ಟೆ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಲೋಕಾರ್ಪಣಾ ಸಮಾರಂಭ ಜೂ.14ರಂದು ಅಪರಾಹ್ನ 2ಗಂಟೆಗೆ ನಡೆಯುವುದು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕರಾದ ಚಿಂತಕ ಮಹಿಮಾ ಜೆ ಪಟೇಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಅವರು ತಿಳಿಸಿದರು.
ಭಾರತೀಯ ಸಂಸ್ಕೃತಿಗೆ ಮಹತ್ವ:
ಈ ವಿದ್ಯಾಸಂಸ್ಥೆಯಲ್ಲಿ ಭಾರತೀಯ ಸಂಸ್ಕೃತಿಗೆ ಮಹತ್ವ ನೀಡಿ, ಅದರ ಆಧಾರದಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ, ವಾಣಿಜ್ಯ ವಿಭಾಗದಲ್ಲಿ ಎಸ್‌ಇಟಿಎ, ಬಿಇಬಿಎ ವಿಭಾಗಳಿದ್ದು, ನೆಟ್, ಸಿಇಟಿ, ಜೆಇಇ, ಕೆವಿಪಿವೈ, ಸಿಪಿಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿಗಳನ್ನು ನೀಡಲಾಗುವುದು.
ಸ್ಫೋಕನ್ ಇಂಗ್ಲೀಷ್, ವ್ಯಕ್ತಿತ್ವ ವಿಕಸನ ತರಬೇತಿಗಳು ನಡೆಯುವುದು. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಗಳು, ಯೋಗ, ಧ್ಯಾನ, ಪ್ರಾರ್ಥನೆಗಳು ನಿತ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ, ವಿವೇಕಾನಂದ ಪಿ.ಯು.ಕಾಲೇಜಿನ ಸಂಚಾಲಕ ಸಂತೋಷ್ ಬೋನಂತಾಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಗುಣಪಾಲ್ ಜೈನ್, ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯು.ಎಸ್ ವಿಶ್ವೇಶ್ವರ ಹಾಜರಿದ್ದರು.







