ಮಂಗಳೂರು ವಿವಿ ಪರಿಷ್ಕೃತ ವೇಳಾಪಟ್ಟಿಗೆ ಅಸಮಾಧಾನ
ಬ್ರಹ್ಮಾವರ, ಜೂ.12: ಮಂಗಳೂರು ವಿಶ್ವವಿದ್ಯಾನಿಲಯದ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯ ಬಗ್ಗೆ ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಹಿಂದೆ ಎಲ್ಲ ಪ್ರಾಂಶುಪಾಲರೊಂದಿಗೆ ಚರ್ಚಿಸಿ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಈಗ ಏಕಾಏಕಿ ಯಾರನ್ನೂ ಸಂಪರ್ಕಿಸದೆ ವಿವಿ ಗೊಂದಲಮಯ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಹಿಂದೆ ಜೂ.19ರಂದು ಕಾಲೇಜುಗಳ ಪ್ರಾರಂಭಿಸುವ ಬಗ್ಗೆ ಸೂಚಿಸಲಾಗಿದ್ದರೂ ಇದೀಗ 12ರಿಂದಲೇ ಕಾಲೇಜುಗಳನ್ನು ಆರಂಭಿಸಿ ಎಂದು ಸುತ್ತೋಲೆ ಹೊರಡಿಸಿರುವುದು ಗೊಂದಲವನ್ನು ಸೃಷ್ಟಿಸಿದೆ ಎಂದು ಸಂಘ ದೂರಿದೆ.
ವಿವಿ ಶೈಕ್ಷಣಿಕ ಕ್ಯಾಲೆಂಡರ್‌ನ್ನು ರಚಿಸುವಾಗ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಒಮ್ಮತದಿಂದ ನಿರ್ಧರಿಸಿದ ನಂತರವೇ ವೇಳಾಪಟ್ಟಿಯನ್ನು ಪ್ರಕಟಿಸಿದಲ್ಲಿ ಉತ್ತಮ ಎಂದು ಸಂಘದ ಅಧ್ಯಕ್ಷ ಪ್ರೊ.ಸ್ಯಾಮ್ಯುಯೆಲ್ ಕೆ ಸ್ಯಾಮ್ಯುಯೆಲ್, ಉಪಾಧ್ಯಕ್ಷ ಪ್ರೊ.ರಾಜನ್ ವಿ.ಎನ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೊ. ರವೀಶ್ ಕುಮಾರ್ ಅವರ ಜಂಟಿ ಪ್ರಕಟಣೆ ತಿಳಿಸಿದೆ.
Next Story





