ಜೂ.26ಕ್ಕೆ ಮೋದಿ-ಟ್ರಂಪ್ ಚೊಚ್ಚಲ ಭೇಟಿ

ಹೊಸದಿಲ್ಲಿ,ಜೂ.12: ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೂ.26ರಂದು ವಾಷಿಂಗ್ಟನ್‌ನಲ್ಲಿ ತಮ್ಮ ಮೊದಲ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ ಎಂದು ಸರಕಾರವು ಸೋಮವಾರ ತಿಳಿಸಿದೆ. ಮೋದಿಯವರು ಜೂ.25 ರಂದು ಅಮೆರಿಕಕ್ಕೆ ಪ್ರಯಾಣಿಸಲಿದ್ದು,ಇದು ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಆ ರಾಷ್ಟ್ರಕ್ಕೆ ಅವರ ಮೊದಲ ಭೇಟಿಯಾಗಲಿದೆ.
ಉಭಯ ನಾಯಕರ ನಡುವಿನ ಮಾತುಕತೆಗಳು ಭಾರತ ಮತ್ತು ಅಮೆರಿಕ ನಡುವೆ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತಂತೆ ಗಾಢವಾದ ದ್ವಿಪಕ್ಷೀಯ ಸಂಬಂಧ ಮತ್ತು ಬಹು ಆಯಾಮಗಳ ವ್ಯೆಹಾತ್ಮಕ ಪಾಲುದಾರಿಕೆಯ ದೃಢೀಕರಣಕ್ಕೆ ಹೊಸ ದಿಕ್ಕನ್ನು ಒದಗಿಸಲಿವೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ. ಮೋದಿ ಮತ್ತು ಟ್ರಂಪ್ ಈಗಾಗಲೇ ಕನಿಷ್ಠ ಮೂರು ಬಾರಿ ದೂರವಾಣಿಯಲ್ಲಿ ಸಂಭಾಷಿಸಿದ್ದಾರೆ.
ಇತ್ತೀಚಿಗೆ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವು ಹಿಂದೆ ಸರಿಯುತ್ತದೆ ಎಂದು ಪ್ರಕಟಿಸಿದ್ದ ಸಂದರ್ಭದಲ್ಲಿ ಟ್ರಂಪ್ ಭಾರತದ ವಿರುದ್ಧ ಮಾಡಿದ್ದ ತೀಕ್ಷ್ಣ ಟೀಕೆಗಳ ಕರಿನೆರಳಿನಲ್ಲಿ ಉಭಯ ನಾಯಕರ ಚೊಚ್ಚಲ ಮಾತುಕತೆಗಳು ನಡೆಯಲಿವೆ.





