ಖಾಲಿ ನಿವೇಶನ ಖರೀದಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣ: ಎಚ್.ಆಂಜನೇಯ

ಬೆಂಗಳೂರು, ಜೂ.12: ಸರಕಾರಕ್ಕೆ ಖಾಲಿ ನಿವೇಶನಗಳು ಲಭಿಸಿದರೆ ಅಲ್ಲಿಯೇ ಮೂಲಭೂತ ಸೌಕರ್ಯವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಸೋಮವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ನಿರಾಣಿ ಹಣಮಂತ್ ರುದ್ರಪ್ಪ ಬದಲಾಗಿ ಅರುಣ್ ಶಹಾಪೂರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸದ್ಯ ಎಲ್ಲ ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ. ಆದರೆ, ಖಾಲಿ ನಿವೇಶನಗಳು ಲಭಿಸಿದರೆ ಅಲ್ಲಿಯೇ ಮೂಲಭೂತ ಸೌಕರ್ಯವುಳ್ಳ ಶಾಲೆಗಳನ್ನು ನಿಮಿಸರ್ಲಾಗುವುದು ಎಂದು ಹೇಳಿದರು.
ಸ್ಥಳೀಯ ಶಾಸಕರು ಹಾಗೂ ಪರಿಷತ್ ಸದಸ್ಯರು ಮಾರಾಟಕ್ಕಿರುವ ಖಾಲಿ ನಿವೇಶನಗಳ ಬಗ್ಗೆ ಮಾಹಿತಿಯನ್ನು ನೀಡಿದರೆ ತಕ್ಷಣ ಡಿಸಿಗಳಿಗೆ ಮಾಹಿತಿ ನೀಡಿ ಖರೀದಿಸಲಾಗುವುದು. ಅಲ್ಲದೆ, ಈಗ 270 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. 133 ಬಾಡಿಗೆ ಕಟ್ಟಡದಲ್ಲಿ, 86 ಬಾಡಿಗೆ ರಹಿತ ಕಟ್ಟಡದಲ್ಲಿ ನಡೆಯುತ್ತಿವೆ. ಹಾಗೂ 65 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. 59 ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಹಾಗೂ 28 ಶಾಲೆಗಳು ಬಾಡಿಗೆ ರಹಿತ ಕಟ್ಟಡದಲ್ಲಿ ನಡೆಯುತ್ತಿವೆ ಎಂದು ವಿವರಣೆ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರನ್ನು ಈಗಾಗಲೇ ಖಾಯಂ ಮಾಡಿಕೊಳ್ಳಲಾಗಿದ್ದು, ಇನ್ನು ಮುಂದೆಯೂ ಖಾಯಂ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.







