ಯುವಕನಿಗೆ ಹಲ್ಲೆ: ಕನ್ಯಾನ ಉದ್ವಿಗ್ನ

ಬಂಟ್ವಾಳ, ಜೂ. 12: ಬಸ್ ಕಾಯುತ್ತಿದ್ದ ಯುವಕನೋರ್ವನಿಗೆ ದನ ಕಳ್ಳತನ ನಡೆಸಲು ಬಂದಿರುವುದಾಗಿ ಆರೋಪಿಸಿ ನಾಲ್ಕು ಮಂದಿಯ ತಂಡವೊಂದು ಹಲ್ಲೆ ನಡೆಸಿರುವ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಾನ ಕುಕ್ಕಾಜೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದ್ದು ಪರಿಸರದಲ್ಲಿ ಉದ್ವಿಗ್ನ ನಿರ್ಮಾಣವಾಗಿದೆ.
ಕನ್ಯಾನ ಕುಕ್ಕಾಜೆಯ ನಿಕ್ಲಾಜೆ ನಿವಾಸಿ ಮುಹಮ್ಮದ್ ಹನೀಫ್ (28) ಹಲ್ಲೆಗೊಳಗಾದ ಯುವಕ.
ಈತನಿಗೆ ಕನ್ಯಾನ ಮುಗುಲಿ ನಿವಾಸಿ ರೌಡಿ ಶೀಟರ್ ಮರ್ತನಾಡಿ ದಿನೇಶ್ ಹಾಗೂ ಆತನ ಮೂವರು ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಜೆಯ ವೇಳೆಗೆ ಕನ್ಯಾನ ಕುಕ್ಕಾಜೆ ಸಮೀಪದ ಮುಗುಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿಗಳು ನೀನು ದನ ಕಳ್ಳತನ ಮಾಡಲು ಇಲ್ಲಿಗೆ ಬಂದಿದ್ದಿಯಾ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ಹನೀಫ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಹನೀಫ್‌ನ ಕಾಲಿಗೆ ಗಾಯವಾಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಮರ್ತನಾಡಿ ದಿನೇಶ್ ಹಾಗೂ ಆತನ ಸಹಚರರು ಕಳೆದ ತಿಂಗಳು ಜಾಮೀನಿನಿಂದ ಬಿಡುಗಡೆಗೊಂಡಿದ್ದರು ಎನ್ನಲಾಗಿದೆ.
ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು ಘಟನೆಯ ಸುದ್ದಿ ಹರಡುತ್ತಿದ್ದಂತೆ ಎರಡು ಕೋಮಿನ ಜನರು ಕನ್ಯಾನ ಜಂಕ್ಷನ್‌ನಲ್ಲಿ ಜಮಾಯಿಸಿದ್ದಲ್ಲದೆ ಪರಸ್ಪರ ಕಲ್ಲು ಮತ್ತು ಸೋಡಾ ಬಾಟಲಿ ತೂರಾಟ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಕೂಡಲೇ ಹೆಚ್ಚಿನ ಅಂಗಡಿಗಳ ಶಟರ್ ಎಳೆಯಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ವಿಟ್ಲ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸೇರಿದ್ದ ಜನರನ್ನು ಚದುರಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಅಲ್ಲದೆ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು ವಿಟ್ಲ ಪರಿಸರದ ಆಯಕಟ್ಟಿನ ಜಾಗದಲ್ಲಿ ಪೊಲೀಸ್ ವ್ಯವಸ್ಥೆ ಬಿಗಿಗೊಳಿಸಲಾಗಿದೆ.







