ವನ್ಯಜೀವಿ ವಿಭಾಗದಲ್ಲಿ ದಿನಗೂಲಿ ನೌಕರರ ಪ್ರತಿಭಟನೆ

ಕಾರ್ಕಳ, ಜೂ.12: ಅರಣ್ಯ ಇಲಾಖೆ ದಿನಗೂಲಿ ನೌಕರರ ಆಯ್ಕೆಯ ಕುರಿತು ಗುತ್ತಿಗೆ ಆಧಾರದಲ್ಲಿ ಟೆಂಡರ್ ಕರೆಯಲಾಗಿದ್ದು, ಅದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘವು ಕಾರ್ಕಳ ವನ್ಯ ಜೀವಿ ವಿಭಾಗದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
2009-12ನೇ ಸಾಲಿನ ಆದೇಶದಂತೆ ಹೆಚ್ಚುವರಿ ವೇತನವನ್ನು ನೀಡುವಂತೆ ಸಂಘವು ಹಲವು ಬಾರಿ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿತ್ತು. ಅದರನ್ವಯ ರಾಜ್ಯದಲ್ಲಿ 2700 ನೌಕರರು ಅರ್ಹತೆ ಹೊಂದಿದ್ದಾರೆ. ಅದರಲ್ಲಿ ಅವಿಭಜಿತ ಜಿಲ್ಲೆಯ ದಿನಗೂಲಿ ನೌಕರರು ಕೂಡಾ ಇದ್ದಾರೆ. ಇದೀಗ ಕುಂದಾಪುರ ಮತ್ತು ಕಾರ್ಕಳದಲ್ಲಿ ಹೊರಗುತ್ತಿಗೆಯಾಧಾರದಲ್ಲಿ ದಿನಗೂಲಿ ನೌಕರರನ್ನು ಆಯ್ಕೆಗೊಳಿಸಲು ಮುಂದಾಗಿದ್ದಾರೆ. ಪರಿಣಾಮ ಈಗಾಗಲೇ 20ರಿಂದ 30 ವರ್ಷ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ನೌಕರರ ದಾಖಲೆಗಳ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಅವರಿಗೆ ತೀವ್ರ ಅನ್ಯಾಯವಾಗುತ್ತದೆ ಎನ್ನುವುದು ಪ್ರತಿಭಟನಕಾರರ ಆಕ್ಷೇಪ. ಹಾಗೂ ಸೀಸನಲ್ ಕೆಲಸಗಳಿಗೆ ಮಾತ್ರ ಟೆಂಡರ್ ಕರೆಯಬೇಕೇ ಹೊರತು, ದಿನಗೂಲಿ ನೌಕರರಿಗಲ್ಲ ಎನ್ನುವ ಬೇಡಿಕೆ ಮುಂದಿಟ್ಟಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗರಾಜ್, ಕಾರ್ಕಳ ಅಧ್ಯಕ್ಷ ಜಯನಾರಾಯಣ, ಕಾರ್ಯದರ್ಶಿ ಸದಾನಂದ, ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಅಖಿಲ್, ನಿರ್ದೇಶಕ ಜಯಕರ ಮತ್ತಿತರರು ಉಪಸ್ಥಿತರಿದ್ದರು.





