ಟಿಎನ್‌ಪಿಎಲ್‌ಗೆ ಗಂಭೀರ್ ಸಲಹೆಗಾರ?
.jpg)
ಚೆನ್ನೈ, ಜೂ.12: ದಿಲ್ಲಿಯ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿ ಮೆಂಟರ್(ಸಲಹೆಗಾರ) ಆಗಿ ಕಾಣಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ.
ಎರಡು ಬಾರಿ ವಿಶ್ವಕಪ್ ಹಾಗೂ ಮತ್ತೆರಡು ಬಾರಿ ಐಪಿಎಲ್ ಚಾಂಪಿಯನ್ ತಂಡದ ಸದಸ್ಯರಾಗಿದ್ದ ಗಂಭೀರ್ ಮುಂಬರುವ ಋತುವಿನಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್(ಟಿಎನ್‌ಪಿಎಲ್)ನಲ್ಲಿ ‘ಮೆಂಟರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
‘‘ಸಲಹೆಗಾರನ ಪಾತ್ರಕ್ಕಾಗಿ ನಾನು ಈಗಾಗಲೇ ಹಲವು ಫ್ರಾಂಚೈಸಿಗಳೊಂದಿಗೆ ಮಾತನಾಡಿದ್ದೇನೆ. ಈ ಟೂರ್ನಿಯು ಉದಯೋನ್ಮುಖ ಆಟಗಾರರಿಗೆ ಸೀಮಿತವಾಗಿದ್ದು, ಸ್ಥಳೀಯ ಪ್ರತಿಭೆಗಳಿರುವ ಇರುವ ವೇದಿಕೆಯಾಗಿದೆ. ಟಿಎನ್‌ಪಿಎಲ್‌ನಲ್ಲಿ ಆಡುವ ಮೂಲಕ ಯುವ ಆಟಗಾರರಿಗಿರುವ ಅವಕಾಶವನ್ನು ಕಸಿಯಲಾರೆ’’ ಎಂದು ಗೌತಮ್ ಹೇಳಿದ್ದಾರೆ.
ಕಳೆದ ವರ್ಷ ನಡೆದಿದ್ದ ಟಿಎನ್‌ಪಿಎಲ್‌ನಲ್ಲಿ ಲ್ಯಾನ್ಸ್ ಕ್ಲೂಸ್ನರ್, ರಾಬಿನ್ ಸಿಂಗ್, ಬ್ರೆಟ್ ಲೀ ಹಾಗೂ ಮೈಕಲ್ ಬೆವನ್ ವಿವಿಧ ಫ್ರಾಂಚೈಸಿಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ನಾಲ್ಕು ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸಿರುವ ಗಂಭೀರ್ ಒಂದು ವೇಳೆ ಮೆಂಟರ್ ಆಗಿ ಸೇರ್ಪಡೆಯಾದರೆ ಟಿಎನ್‌ಪಿಎಲ್‌ನಲ್ಲಿ ಹೊಸ ಕಳೆ ಬರಲಿದೆ.





