ಕುಂಬ್ಳೆಗೆ ಸಂಜಯ್ ಜಗದಾಲೆ ಬೆಂಬಲ

ಹೊಸದಿಲ್ಲಿ, ಜೂ.12: ಬಿಸಿಸಿಐನ ಮಾಜಿ ಕಾರ್ಯದರ್ಶಿ, ಅತ್ಯಂತ ಅನುಭವಿ ಕ್ರಿಕೆಟ್ ಆಡಳಿತಾಧಿಕಾರಿ, ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸಂಯೋಜಕ ಸಂಜಯ್ ಜಗದಾಲೆ ಭಾರತ ಕ್ರಿಕೆಟ್ ತಂಡದಲ್ಲಿ ಅನಿಲ್ ಕುಂಬ್ಳೆ ಕೋಚ್ ಆಗಿ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದಾರೆ.
ಕುಂಬ್ಳೆ ಕೋಚ್ ಆಗಿ ಒಂದು ವರ್ಷ ಕಳೆಯುತ್ತಲೇ ವಿವಾದ ತಲೆ ಎತ್ತಿದ್ದು, ಹೊಸ ಕೋಚ್‌ರನ್ನು ಆಯ್ಕೆ ಮಾಡಲು ಬಿಸಿಸಿಐ ಪ್ರಕ್ರಿಯೆಯನ್ನು ಆರಂಭಿಸಿದೆ. ಬಿಸಿಸಿಐನ ಈ ಹೆಜ್ಜೆಯ ಕುರಿತು ಜಗದಾಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಕ್ರಿಕೆಟ್ ಎನ್ನುವುದು ಸಂಘಟಿತ ಪಂದ್ಯ. ಆ ಪಂದ್ಯದಲ್ಲಿ ಪ್ರತಿಯೊಬ್ಬರ ಕಾಣಿಕೆ ಇರುತ್ತದೆ. ಸಹಾಯಕ ಸಿಬ್ಬಂದಿ ಹಾಗೂ ಕ್ರಿಕೆಟಿಗರ ವಿಷಯಕ್ಕೆ ಸಂಬಂಧಪಟ್ಟಂತೆ ಅವರ ನಿರ್ವಹಣೆಯೇ ಮಾನದಂಡವಾಗಿರುತ್ತದೆ.
ಆ ನಿಟ್ಟಿನಲ್ಲಿ ಕುಂಬ್ಳೆ ನಿರ್ವಹಣೆ ಉತ್ತಮವಾಗಿದೆ. ಕೋಚ್ ಆಗಿ ಕುಂಬ್ಳೆಗೆ ಯಾರೂ ಸವಾಲೆಸೆಯುವಂತಿಲ್ಲ ಅಥವಾ ಅವರ ಕ್ರಿಕೆಟ್ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ. ಅವರು ಟೀಮ್ ಇಂಡಿಯಾಕ್ಕೆ ಹೊಸ ಶಕ್ತಿಯ ಜೊತೆಗೆ ಸ್ಫೂರ್ತಿಯನ್ನು ತುಂಬಿದ್ದಾರೆ. ನನಗೇನಾದರೂ ಅವಕಾಶ ಲಭಿಸಿದ್ದರೆ ಅವರನ್ನೇ ಕೋಚ್ ಆಗಿ ಮುಂದುವರಿಸುತ್ತಿದ್ದೆ’’ ಎಂದು ಮಾಜಿ ಪ್ರಥಮ ದರ್ಜೆ ಕ್ರಿಕೆಟಿನಾಗಿರುವ ಜಗದಾಲೆ ಅಭಿಪ್ರಾಯಪಟ್ಟಿದ್ದಾರೆ.





